newsics.com
ವೈದ್ಯಕೀಯ ಲೋಕದಲ್ಲಿ ಕೆಲವೊಮ್ಮೆ ಊಹಿಸಲಾಗದ ಘಟನೆಗಳು ನಡೆದುಬಿಡುತ್ತವೆ. ಇಂಥದ್ದೇ ಒಂದು ವಿಚಿತ್ರ ಘಟನೆ ಬ್ರೆಜಿಲ್‌ನಲ್ಲಿ ನಡೆದಿದ್ದು, ಈ ಅವಳಿ ಮಕ್ಕಳ ಅಪ್ಪ ಮಾತ್ರ ಬೇರೆ ಬೇರೆ.
ಕೆಲ ವರ್ಷಗಳ ಹಿಂದೆ ಸದ್ದು ಮಾಡಿದ್ದ ಈ ಘಟನೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬ್ರೆಜಿಲ್‌ನ 19 ವರ್ಷದ ಯುವತಿ ಇಂಥದ್ದೊಂದು ವಿಚಿತ್ರ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಬ್ರೆಜಿಲ್‌ನ ಗೋಯಾಸ್‌ನಲ್ಲಿರುವ ಮಿನೆರಿಯೊಸ್‌ನ ಮಹಿಳೆ ಈಕೆ.
ಈ ಅವಳಿ ಮಕ್ಕಳ ತಾಯಿ ಒಂದೇ ದಿನ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳಂತೆ. ಇದರಿಂದ ಗರ್ಭ ಧರಿಸಿದ ಮಗುವಿನ ಅಪ್ಪ ಯಾರು ಎನ್ನುವ ಬಗ್ಗೆ ಗೊಂದಲ ಉಂಟಾಗಿದೆ. ಇದೇ ಕಾರಣಕ್ಕೆ ತಂದೆ ಯಾರೆಂದು ದೃಢೀಕರಿಸಲು ಅವಳು ಪಿತೃತ್ವ ಪರೀಕ್ಷೆ ಅರ್ಥಾತ್ ಡಿಎನ್ಎ ಪರೀಕ್ಷೆ ಮಾಡಿಸಿದ್ದಾಳೆ. ಅದನ್ನು ನೋಡಿ ಅವಳಿಗೇ ಗಾಬರಿಯಾಗಿದೆ. ಏಕೆಂದರೆ, ಒಂದು ಮಗುವಿನ ಡಿಎನ್ಎ ಒಂದು ಗಂಡಸಿನದ್ದು, ಇನ್ನೊಂದು ಮತ್ತೊಂದು ಗಂಡಸಿನದ್ದು.
ಎರಡು ವಿಭಿನ್ನ ಜೈವಿಕ ತಂದೆಗಳೊಂದಿಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಜೈವಿಕ ವಿದ್ಯಮಾನವನ್ನು ಹೆಟೆರೊಪಿಟರ್ನಲ್ ಸೂಪರ್‌ಫೆಕಂಡೇಶನ್ ಎಂದು ಕರೆಯಲಾಗುತ್ತದೆ.
ಋತುಚಕ್ರದ ಸಮಯದಲ್ಲಿ ಬಿಡುಗಡೆಯಾಗುವ ಎರಡನೇ ಅಂಡಾಣುವು ಪ್ರತ್ಯೇಕ ಲೈಂಗಿಕ ಸಂಪರ್ಕದಿಂದ ಬೇರೆ ಪುರುಷನ ವೀರ್ಯ ಕೋಶಗಳಿಂದ ಫಲವತ್ತಾದಾಗ ಇದು ಸಂಭವಿಸುತ್ತದೆ.
ಸರಳವಾಗಿ ಹೇಳುವುದಾದರೆ, ಮಹಿಳೆಯಲ್ಲಿ ಒಂದು ಅಂಡಾಣು ಬದಲು ಎರಡು ಅಂಡಾಣುಗಳು ಬಿಡುಗಡೆಯಾದ ತಿಂಗಳಲ್ಲಿ ಇಂಥದೊಂದು ಅಚ್ಚರಿ ಘಟಿಸಲು ಅವಕಾಶವಿದೆ. ಈ ಎರಡೂ ಅಂಡಾಣುಗಳು ಇಬ್ಬರು ಪುರುಷರ ವೀರ್ಯಾಣುಗಳಿಂದ ಫಲಿತಗೊಂಡರೆ ಮಹಿಳೆ ಜನ್ಮ ನೀಡುವ ಅವಳಿಗಳ ತಂದೆ ಬೇರೆ ಬೇರೆಯಾಗಿರುವ ಸಾಧ್ಯತೆಯಿದೆ ಎನ್ನುತ್ತಾರೆ ವೈದ್ಯರು.
ವೈದ್ಯರ ಪ್ರಕಾರ, ಈ ಪ್ರಕರಣವು ಅತ್ಯಂತ ಅಪರೂಪ ಮತ್ತು ಮಿಲಿಯನ್‌ನಲ್ಲಿ ಒಂದು ಪ್ರಕರಣ ಮಾತ್ರ ಸಂಭವಿಸುತ್ತದೆ.
ಮಾನವರಲ್ಲಿ ಈ ವಿದ್ಯಮಾನ ಅಪರೂಪವಾಗಿದ್ದರೂ, ನಾಯಿಗಳು, ಬೆಕ್ಕುಗಳು ಮತ್ತು ಹಸುಗಳಲ್ಲಿ ಹೆಟೆರೊಪಿಟರ್ನಲ್ ಸೂಪರ್‌ಫೆಕಂಡೇಶನ್ ಸಾಮಾನ್ಯವಾಗಿದೆ ಎಂಬುದು ತಜ್ಞವೈದ್ಯರ ಅಭಿಪ್ರಾಯ.