newsics.com
ಮೈಸೂರು ; ಕಬಿನಿ ಜಲಾಶಯದ ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಭಾನುವಾರ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ ಬಾಗೀನ ಅರ್ಪಿಸಿದ ಬಳಿಕ , ಅಣೆಕಟ್ಟೆಯ ಕಾವಲು ಗೋಪುರದ ಬಳಿ ೩೨.೨೫ ಕೋಟಿ ವೆಚ್ಚದ ಅಣೆಕಟ್ಟೆ ಪುನಶ್ವೇತನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ, ಕಬಿನಿ ಮಾತೆಗೆ ಪ್ರಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದೇವೆ. ಪ್ರತಿ ವರ್ಷದಂತೆ ಜಲಾಶಯ ತುಂಬಿದಾಗ ಬಾಗಿನ ಅರ್ಪಿಸಲಾಗಿದ್ದು, ರೈತರಿಗೆ ಒಳ್ಳೆಯದಾಗಲೆಂದು ಕಪಿಲಾ ಮಾತೆಗೆ ಪ್ರಾರ್ಥಿಸಲಾಗಿದೆ. ‘ಕಪಿಲಾ ನದಿಯು ಕೇರಳದಲ್ಲಿ ಹುಟ್ಟಿ, ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಇದು ಕಾವೇರಿಯ ಪ್ರಮುಖ ಉಪನದಿಯಾಗಿದ್ದು, ೧.೧೩ ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ. ಈಗ ೧.೦೮ ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಸಿಗುತ್ತಿದೆ. ಇನ್ನೂ ೫ ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಸಿಗಬೇಕಾಗಿದೆ. ಇದನ್ನು ಬಳಸಿಕೊಳ್ಳುವ ಕೆಲಸವನ್ನು ಮಾಡಲಿದ್ದೇವೆ ಎಂದು ತಿಳಿಸಿದರು.
ಕಬಿನಿ ಜಲಾಶಯ ನಿರ್ಮಾಣ ೧೯೫೦ರಲ್ಲಿ ಆರಂಭವಾಗಿ ೧೯೭೪ರಲ್ಲಿ ಪೂರ್ಣಗೊಂಡಿದೆ. ಈ ಜಲಾಶಯಕ್ಕೆ ೫೦ ವರ್ಷಗಳು ತುಂಬಿವೆ. ಹಾಗಾಗಿ ಜಲಾಶಯವನ್ನು ಪುನಶ್ಚೇತನಗೊಳಿಸಿ, ಭದ್ರಪಡಿಸಬೇಕಾಗಿದೆ. ಹಾಗೆಂದ ಮಾತ್ರಕ್ಕೆ ಜಲಾಶಯ ಅಭದ್ರತೆಯಿಂದಿದೆ ಎಂದಲ್ಲ. ೫೦ ವರ್ಷವಾಗಿರುವ ಕಾರಣ ಈ ಜಲಾಶಯನ್ನು ಪುನಶ್ಚೇತನಗೊಳಿಸಬೇಕಾಗಿದ್ದು, ಅದಕ್ಕಾಗಿ ಮಲೆಮಹದೇಶ್ವರ ಬೆಟ್ಟದಲ್ಲಿ ಏಪ್ರೀಲ್ ೨೪ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ೩೨.೨೫ ಕೋಟಿರೂಗಳ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಇನ್ನೂ ಅನೇಕ ಯೋಜನೆಗಳನ್ನು ಮಾಡಿದ್ದೇವೆ. ಈ ಜಲಾಶಯದ ಎದುರು ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ತಾರಕ ಜಲಾಶಯದ ನಾಲೆಗಳ ಆಧುನೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
‘ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ, ಸಮಾನಾಂತರ ಜಲಾಶಯ ನಿರ್ಮಿಸಲಾಗುವುದು. ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿಯವರದ್ದೇ ಸರ್ಕಾರವಿದೆ. ಮಹಾದಾಯಿ ಮತ್ತು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ’ ಎಂದು ಒತ್ತಾಯಿಸಿ, ಸವಾಲು ಹಾಕಿದರು.
ದೇವನಹಳ್ಳಿಯಲ್ಲಿ ರೈತರ ಹೋರಾಟಕ್ಕೆ ಮಣಿದು ಭೂಸ್ವಾಧೀನ ಕೈಬಿಟ್ಟಿರುವುದಕ್ಕೆ ಹಲವು ಕೈಗಾರಿಕೆಗಳು ಆಚಿಧ್ರಪ್ರದೇಶಕ್ಕೆ ಹೋಗುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ನಾವು ಕೈಗಾರಿಕೆಗಳಿಗೆ ಜಮೀನು ಕೊಡಲ್ಲ ಎಂದು ಹೇಳಿಲ್ಲ, ಜಮೀನು ಕೊಡ್ತೀವಿ, ಚಂದ್ರಬಾಬು ನಾಯ್ಡು ಹಾಗೂ ಅವರ ಪುತ್ರ ಏನೇ ರಾಜಕೀಯ ಮಾಡಿದರೂ ನಮ್ಮ ರಾಜ್ಯದಿಂದ ಯಾವ ಕೈಗಾರಿಕೆಗಳೂ ಹೊರ ಹೋಗುವುದಿಲ್ಲ ಎಂದು ಹೇಳಿದರು. ಬಿಜೆಪಿಯವರು ಬಡವರು, ಅಭಿವೃದ್ಧಿ, ಸಾಮಾಜಿಕ ನ್ಯಾಯದ ವಿರೋಧಿಗಳು. ಹಾಗಾಗಿ ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಬಿನಿ ಜಲಾಶಯದಿಂದ ಏತ ನೀರಾವರಿ ಯೋಜನೆ, ಜಲಾಶಯದ ಗೇಟ್‌ಗಳ ಪುನಶ್ಚೇತನಕ್ಕೆ ತಯಾರಿ ಮಾಡಿಕೊಂಡಿದ್ದೇವೆ. ೮೮ ಕೋಟಿ ಬಿಡುಗಡೆಗೆ ಮಹದೇಶ್ವರ ಬೆಟ್ಟದಲ್ಲಿನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಜಲಾಶಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು. ಮೇಕೆದಾಟು ಯೋಜನೆ ಆದ ನಚಿತರ ಅಚ್ಚುಕಟ್ಟು ಪ್ರದೇಶವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.