newsics.com
ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಕುರಿತು ಅಪಮಾನಕರ ಹೇಳಿಕೆ ನೀಡಿದ್ದ ಆರೋಪದಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ವಿರುದ್ಧ ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಶುಕ್ರವಾರ ಆದೇಶಿಸಿತು.
ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್, ಅರ್ಜಿದಾರರು ವಿಚಾರಣೆಗೆ ಸಹಕರಿಸಿದಲ್ಲಿ ಬಲವಂತದ ಕ್ರಮ ಬೇಡ ಎಂದು ತಿಳಿಸಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಇದೊಂದು ರಾಜಕೀಯಪ್ರೇರಿತ ಪ್ರಕರಣ. ದೂರು ನೀಡಿರುವ ಮಹಿಳೆ ವಿದ್ಯುನ್ಮಾನ ಮಾಧ್ಯಮದಲ್ಲಿ ನೋಡಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಅರ್ಜಿದಾರರು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ದೂರುದಾರರು ಸಂತ್ರಸ್ತೆ ಅಲ್ಲ. ಜತೆಗೆ, ಮಾಧ್ಯಮವೊಂದರಲ್ಲಿ ಪ್ರಕಟವಾದ ಸುದ್ದಿಯನ್ನು ನೋಡಿ ದೂರು ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣಕ್ಕೆ ತಡೆ ನೀಡಬೇಕು ಎಂದು ಕೋರಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬೆಳ್ಳಿಯಪ್ಪ, ಅರ್ಜಿದಾರರು ಪದೇ ಪದೇ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವುದು ಚಾಳಿಯನ್ನಾಗಿಸಿಕೊಂಡಿದ್ದಾರೆ. ಈ ಹಿಂದೆ ಕಲಬುರಗಿ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನದ ಪರ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದ್ದರು.
ಇಂತಹ ಪ್ರಕರಣದಲ್ಲಿ ತಡೆ ನೀಡಿದಲ್ಲಿ ವಿಚಾರಣೆಗೆ ಅಡ್ಡಿಯಾಗಲಿದೆ. ಪ್ರತಿ ಪ್ರಕರಣದಲ್ಲಿ ತಡೆ ನೀಡುತ್ತಿದ್ದರೆ ತನಿಖಾಧಿಕಾರಿಗಳ ಮನೋಬಲ ಕ್ಷೀಣವಾಗಲಿದೆ. ಅರ್ಜಿದಾರರು ವಿಚಾರಣಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿ ಇತ್ಯರ್ಥ ಪಡಿಸಿಕೊಳ್ಳಲಿ.
ಅಲ್ಲದೆ, ಪ್ರಕರಣ ದಾಖಲಾದ 24 ತಾಸಿನಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಮಹಿಳೆಯಾಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಂತ್ರಸ್ತರಾಗಿದ್ದಾರೆ. ಆದ್ದರಿಂದ ತಡೆ ನೀಡಬಾರದು ಎಂದು ಕೋರಿದರು.
ವಾದ–ಪ್ರತಿವಾದ ಆಲಿಸಿದ ಪೀಠ ಪ್ರಕರಣದ ವಿಚಾರಣೆ ನಡೆಸಬಹುದು. ಆದರೆ, ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಕಳೆದ ಜುಲೈ 1ರಂದು ಬಿಜೆಪಿ ವಿಧಾನಸೌಧದ ಆವರಣದ ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನೆ ವೇಳೆ ರವಿಕುಮಾರ್ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಕುರಿತು ಅಪಮಾನಕರ ಪದಗಳನ್ನು ಬಳಸಿ ನಿಂದಿಸಿದ್ದಾಗಿ ಆರೋಪಿಸಲಾಗಿದೆ. ಈಭ ಸಂಬಂಧ ಜೆ.ಪಿ.ನಗರದ ನಿವಾಸಿ, ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಗರ್ತನಾ ಅವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ದೂರಿನಲ್ಲಿ ರವಿಕುಮಾರ್ ಅವರ ಹೇಳಿಕೆ ಮುಖ್ಯಕಾರ್ಯದರ್ಶಿ ಹುದ್ದೆಗೆ ಅಗೌರವ ತಂದಿದೆ. ಅಲ್ಲದೇ ಇಡೀ ಮಹಿಳಾ ಕುಲಕ್ಕೂ ಅಗೌರವ ತೋರಿದಂತಾಗಿದೆ. ಆರೋಪಿತರು ಲೈಂಗಿಕ ಅರ್ಥ ಬರುವಂತೆ ಮಾತಾಡಿದ್ದಾರೆ ಎಂದು ಆರೋಪಿಸಿದ್ದರು.
ಈ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ರವಿಕುಮಾರ್ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು.
Samyuktha Hegde : ಗೆಳತಿಗೆ ಲಿಪ್ ಕಿಸ್ ಮಾಡುವ ಪೋಸ್ಟ್ ಹಂಚಿಕೊಂಡ ಸಂಯುಕ್ತಾ ಹೆಗ್ಡೆ