newsics.com/ನ್ಯೂಸಿಕ್ಸ್
ಮಸ್ಕತ್ : ಒಮಾನಿ ಸಮುದ್ರದಲ್ಲಿ ಭಾರತೀಯ ಸರಕು ಹಡಗು ಎಂಎಸ್ವಿ ವಿರಾಟ್-1 ಮುಳುಗಿದ ಭೀಕರ ಘಟನೆಯ ವಿವರಗಳು ಈಗ ಬಹಿರಂಗಗೊಂಡಿವೆ.
ನಡುಸಮುದ್ರದಲ್ಲಿ ಹಡಗಿನ ಇಂಜಿನ್ ದಿಢೀರ್ ಕೈಕೊಟ್ಟಿದ್ದು, ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿ ಹಡಗು ನಿಯಂತ್ರಣ ಕಳೆದುಕೊಂಡಿತು. ನೀರು ಒಳನುಗ್ಗುತ್ತಿದ್ದಂತೆ ಮುಳುಗುವ ಹಂತ ತಲುಪಿದಾಗ ಸಿಬ್ಬಂದಿ SOS ಸಂದೇಶ ರವಾನಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತು ಅಮೆರಿಕದ ನೌಕಾಪಡೆ ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಬಂದಿದೆ.
ಈ ವೇಳೆ ಅತ್ಯಂತ ವೇಗವಾಗಿ ಕಾರ್ಯಾಚರಣೆಗೆ ಇಳಿದ ಅಮೆರಿಕ ನೌಕಾಪಡೆಯ P-8 ಗಸ್ತು ವಿಮಾನವು ಸಮುದ್ರಕ್ಕೆ ಲೈಫ್ ರಾಫ್ಟ್ ಅನ್ನು ಏರ್ಡ್ರಾಪ್ ಮಾಡುವ ಮೂಲಕ ಎಲ್ಲಾ 14 ಭಾರತೀಯ ನಾವಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.
ಒಮಾನ್ನ ರಾಸ್ ಅಲ್ ಹದ್ದ್ನಿಂದ ಸುಮಾರು 80 ನಾಟಿಕಲ್ ಮೈಲಿ ದೂರದಲ್ಲಿ ಈ ತುರ್ತು ಪರಿಸ್ಥಿತಿ ಸೃಷ್ಟಿಯಾಗಿತ್ತು. ಹಡಗು ಮುಳುಗುತ್ತಿರುವುದನ್ನು ಖಚಿತಪಡಿಸಿಕೊಂಡ ಅಮೆರಿಕದ ವಿಮಾನವು ನಾವಿಕರ ತಲೆಯ ಮೇಲೆಯೇ ಸುರಕ್ಷಿತವಾಗಿ ಲೈಫ್ ರಾಫ್ಟ್ ಅನ್ನು ಕೆಳಗೆ ಹಾಕಿತು. ವಿಮಾನದಲ್ಲಿದ್ದ ಸಿಬ್ಬಂದಿ ಇಡೀ ಕಾರ್ಯಾಚರಣೆಯ ಮೇಲೆ ನಿಗಾ ವಹಿಸಿದ್ದು, ಮುಳುಗುತ್ತಿದ್ದ ಹಡಗಿನಿಂದ ಹೊರಬಂದ ಎಲ್ಲಾ 14 ಭಾರತೀಯರು ಯಶಸ್ವಿಯಾಗಿ ಆ ಜೀವ ರಕ್ಷಕ ದೋಣಿಯನ್ನು ಹತ್ತಿ ಕುಳಿತುಕೊಂಡಿದ್ದನ್ನು ದೃಢಪಡಿಸಿದ್ದಾರೆ.
ಭಾರತೀಯ ನಾವಿಕರು ಅಪಾಯದಲ್ಲಿರುವ ಸುದ್ದಿ ತಿಳಿಯುತ್ತಿದ್ದಂತೆ, ಅರಬ್ಬಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ನೌಕಾಪಡೆಯ ಯುದ್ಧ ಹಡಗುಗಳನ್ನು ತಕ್ಷಣವೇ ಘಟನಾ ಸ್ಥಳದ ಕಡೆಗೆ ತಿರುಗಿಸಲಾಯಿತು. ಇದೇ ಸಮಯದಲ್ಲಿ ಸೆಂಟ್ ಕಿಟ್ಸ್ ಮತ್ತು ನೆವಿಸ್ ದೇಶದ ಧ್ವಜ ಹೊತ್ತ ಎಂಬಿ ಜಬಲ್ ಅಲಿ 9 (MV Jabal Ali 9) ಎಂಬ ವಾಣಿಜ್ಯ ಹಡಗು ಕೂಡ ತನ್ನ ಮಾರ್ಗವನ್ನು ಬದಲಾಯಿಸಿ ನಾವಿಕರ ರಕ್ಷಣೆಗೆ ಧಾವಿಸಿದೆ. ಪ್ರಸ್ತುತ ಲೈಫ್ ರಾಫ್ಟ್ನಲ್ಲಿರುವ ಎಲ್ಲಾ 14 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಆ ಹಡಗಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.