newsics.com
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರೆಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ನಾಯಕನ ಘೋಷಣೆಯಾಗಿದೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ನಾಯಕರಾಗಿ ರಜತ್ ಪಾಟೀದಾರ್ ನೇಮಕವಾಗಿದ್ದಾರೆ. ನೇಮಕವಾಗಿದ್ದಾರೆ.
ಈ ಮೂಲಕ ಹೊಸ ತಂಡ ಹೊಸ ನಾಯಕನೊಂದಿಗೆ ಹೊಸ ಹುರುಪಿನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ನೀರಸ ಪ್ರದರ್ಶನದ ಮೂಲಕ ಕಂಗಾಲಾಗಿದ್ದ ಆರ್‌ಸಿಬಿ ತಂಡವು ಇದಾದ ಬಳಿಕ ಫಿನಿಕ್ಸ್‌ನಂತೆ ಎದ್ದು ನಿಂತು ಸತತ 7 ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಇದೀಗ ಆರ್‌ಸಿಬಿ ತಂಡವು ಹಳೆಯ ತಪ್ಪುಗಳನ್ನು ತಿದ್ದಿಕೊಂಡು 18ನೇ ಆವೃತ್ತಿಯಲ್ಲಿ ಹೊಸ ಅಧ್ಯಾಯ ಸೃಷ್ಟಿಸಲು ಸಜ್ಜಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ದ್ವಿತಿಯಾರ್ಧದಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ರಜತ್ ಪಾಟೀದಾರ್‌ಗೆ ಆರ್‌ಸಿಬಿ ಫ್ರಾಂಚೈಸಿಯು ನಾಯಕತ್ವ ಪಟ್ಟ ಕಟ್ಟಿದೆ. ರಜತ್ ಪಾಟೀದಾರ್ ಅವರ ಮೇಲೆ ವಿಶ್ವಾಸ ಇದ್ದಿದ್ದಕ್ಕಾಗಿಯೇ ಆರ್‌ಸಿಬಿ ಫ್ರಾಂಚೈಸಿಯು ಮಧ್ಯಪ್ರದೇಶ ಮೂಲದ ಆಟಗಾರನನ್ನು ಐಪಿಎಲ್ ಮೆಗಾ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಂಡಿತ್ತು. ಆರ್‌ಸಿಬಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಾನ್ವಿತ ಯುವ ಬ್ಯಾಟರ್ ಆಗಿರುವ ಪಾಟೀದಾರ್ ಬೆಂಗಳೂರು ತಂಡದ ನಾಯಕರಾಗಿ ನೇಮಕವಾಗಿದ್ದಾರೆ