newsics.com
ಕೇರಳ: ಉಬರ್ ಚಾಲಕನೋರ್ವ ಮಹಿಳೆಗೆ ಮೆಸೇಜ್ ಮಾಡುವ ಮೂಲಕ, ಕಿರುಕುಳ ಕೊಟ್ಟು ಕೆಲಸ ಕಳೆದುಕೊಂಡ ಘಟನೆ ಕೇರಳದಲ್ಲಿ ನಡೆದಿದೆ.
ಮುಹಮ್ಮದ್ ಮಿಶಾಲ್ ಕೆಲಸ ಕಳೆದುಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ಈತನ ವಿರುದ್ಧ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಕಠಿಣ ಪದಗಳಿಂದ ಬರೆದು ಶೇರ್ ಮಾಡಿದ್ದರು, ಅಷ್ಟೇಅಲ್ಲದೇ, ಈ ಬಗ್ಗೆ ಉಬರ್ ಗೂ ತಿಳಿಸಿದ್ದರು, ಹೀಗಾಗಿ ಕಂಪೆನಿ ಈ ಕ್ರಮ ತೆಗೆದುಕೊಂಡಿದೆ.
ಆದರೆ ಎಷ್ಟೋ ಮಂದಿ, ಇಂಥ ದೌರ್ಜನ್ಯ ಎದುರಿಸುತ್ತಿದ್ದರೂ ಯಾವ್ಯಾವುದೋ ಕಾರಣಕ್ಕೆ, ನಮಗ್ಯಾಕೆ ಉಸಾಬರಿ ಎಂದು ಸುಮ್ಮನಾಗಿ ಬಿಡುತ್ತಾರೆ. ಆದರೆ ಈ ಮಹಿಳೆ ಈ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರಿಂದ ಚಾಲಕನಿಗೆ ತಕ್ಕ ಶಾಸ್ತಿಯಾಗಿದೆ.
ಘಟನೆಯ ಕುರಿತು ಹೇಳುವುದಾದರೆ, ಸ್ಮೃತಿ ಕಣ್ಣನ್ ಎನ್ನುವ ಮಹಿಳೆ ಉಬರ್ ಬುಕ್ ಮಾಡಿದಾಗ, ಸಿಕ್ಕಿದ್ದು ಮುಹಮ್ಮದ್ ಮಿಶಾಲ್ ಎಂಬಾತ ಚಾಲಕನಾಗಿರುವ ಕ್ಯಾಬ್. ಅದರಲ್ಲಿ ಆಕೆ ಪ್ರಯಾಣಿಸಿ ಮನೆಗೆ ಮರಳಿದಾಗ ಶಾಕಿಂಗ್ ಸಂದೇಶಗಳು ಆಕೆಯ ವಾಟ್ಸ್ಆ್ಯಪ್ನಲ್ಲಿ ಬರತೊಡಗಿದವು. ನಾನ್ಯಾರು ಗೊತ್ತಾಯ್ತಾ, ಹಾಗೆ ಹೀಗೆ ಕೇಳಿದ ಈ ಮುಹಮ್ಮದ್, ಕೊನೆಗೆ, ನೀವು ಬಳಸಿರುವ ಪರ್ಫ್ಯೂಮ್ ಇಷ್ಟವಾಗಿದೆ. ಅದು ಯಾವ ಕಂಪೆನಿದ್ದು ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಹೀಗೆ ಪದೇ ಪದೇ ಮೆಸೇಜ್ ಮಾಡಿ ಕಿರುಕುಳ ಕೊಟ್ಟಿದ್ದಕ್ಕೆ ಆತನನ್ನು ಬ್ಲಾಕ್ ಮಾಡಿರುವ ಮಹಿಳೆ ಇದನ್ನು ಉಬರ್ ಕಂಪೆನಿಯ ಗಮನಕ್ಕೆ ತಂದಿದ್ದಾಳೆ.
ಉಬರ್ ಚಾಲಕನೊಬ್ಬ ನನಗೆ WhatsApp ನಲ್ಲಿ ಸಂದೇಶ ಕಳುಹಿಸಿ ನನಗೆ ಭಯಾನಕ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ. ಇಂಥ ಕ್ಯಾಬ್ ಗಳಲ್ಲಿ ಮಹಿಳೆಯರು ಪ್ರಯಾಣಿಸುವುದುದ ಎಷ್ಟು ಸುರಕ್ಷಿತ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉಬರ್ ಆತನನ್ನು ವಜಾಗೊಳಿಸಲಾಗಿರುವುದಾಗಿ ಹೇಳಿದ್ದೂ ಅಲ್ಲದೇ, ಒಂದು ಸ್ಪಷ್ಟನೆಯನ್ನೂ ಕೊಟ್ಟಿದೆ. ಅದೇನೆಂದರೆ, ನಾವು ಉಬರ್ ಸವಾರರು ಮತ್ತು ಚಾಲಕರ ಫೋನ್ ಸಂಖ್ಯೆಗಳನ್ನು ಎಲ್ಲಾ ಟ್ರಿಪ್‌ಗಳಲ್ಲಿ ಮರೆಮಾಚುತ್ತೇವೆ. ಆದರೆ ಹಣ ನೀಡುವಾಗ UPI ಅಪ್ಲಿಕೇಶನ್ ಬಳಸಿದ್ದರಿಂದ ಚಾಲಕನಿಗೆ ಫೋನ್ ನಂಬರ್ ಸಿಕ್ಕಿರುವ ಸಾಧ್ಯತೆ ಇದೆ ಎಂದು ಕಂಪೆನಿ ಹೇಳಿದೆ. ಆದರೆ ಇದು ಎಷ್ಟು ಸತ್ಯ ಎನ್ನುವುದು ಪ್ರಯಾಣಿಕರ ಪ್ರಶ್ನೆ. ಕ್ಯಾಬ್ ಬುಕ್ ಮಾಡುವುದು ನಮ್ಮ ಸಂಖ್ಯೆಯಿಂದ, ಜೊತೆಗೆ ಬುಕ್ ಆದ ತಕ್ಷಣ ಡ್ರೈವರ್ಗಳು ವಾಪಸ್ ಕಾಲ್ ಮಾಡಿ ಇರುವ ಜಾಗವನ್ನು ಪ್ರಶ್ನಿಸುತ್ತಾರೆ. ಹಾಗಿದ್ದ ಮೇಲೆ ಫೋನ್ ನಂಬರ್ ಸಿಗುವುದಿಲ್ಲ ಎನ್ನುವುದಕ್ಕೆ ಅರ್ಥವೇನು ಎಂದು ಪ್ರಶ್ನಿಸುತ್ತಿದ್ದಾರೆ.