newsics.com
ಬೆಂಗಳೂರು: 20 ವೋಲ್ವೋ ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳಿಗೆ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ನಿಗಮದ ಅಧ್ಯಕ್ಷ, ಶಾಸಕ ಎಸ್. ಆರ್. ಶ್ರೀನಿವಾಸ್ (ವಾಸು) ಮತ್ತಿತರರು ಮಂಗಳವಾರ ಚಾಲನೆ ನೀಡಿದರು.
ಇದೇ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹುಮ್ನಾಬಾದ್ ತರಬೇತಿ ಕೇಂದ್ರದಲ್ಲಿ ನಡೆಸಿದ ಚಾಲನಾ ವೃತ್ತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ 82 ಅಭ್ಯರ್ಥಿಗಳ ಪೈಕಿ 14 ಮಂದಿಗೆ ಚಾಲಕ ಕಂ ನಿರ್ವಾಹಕರ ಹುದ್ದೆಗೆ ತಾತ್ಕಾಲಿಕ ನಿಯೋಜನೆ ಆದೇಶ ವಿತರಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 8896 ವಾಹನಗಳ ಮೂಲಕ 8063 ಅನುಸೂಚಿಗಳಿಂದ 28.76 ಲಕ್ಷ ಕಿ.ಮೀ ಕ್ರಮಿಸಿ 35.43 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದು, ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
5800 ಹೊಸ ಬಸ್ಸುಗಳ ಸೇರ್ಪಡೆಗೆ ಸರ್ಕಾರ ಅನುಮೋದನೆ ನೀಡಿದ್ದು, ಈ ಪೈಕಿ ನಾಲ್ಕು ನಿಗಮಗಳಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 4301 ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದರು.
ಶಕ್ತಿ ಯೋಜನೆಯಲ್ಲಿ 356 ಕೋಟಿ ಮಹಿಳೆಯರು ಪ್ರಯಾಣಿಸಿದ್ದು ಅವರ ಪ್ರಯಾಣದ ಶೂನ್ಯ ಟಿಕೆಟ್ ಮೌಲ್ಯ 8598.23 ಕೋಟಿ ರೂ.ಗಳಾಗಿರುತ್ತದೆ. ಮಹಿಳಾ ಪ್ರಯಾಣಿಕರ ಪ್ರಯಾಣದ ಪ್ರಮಾಣ ಶೇ.58.37 ಆಗಿರುತ್ತದೆ. ಶಕ್ತಿ ಯೋಜನೆ ಜಾರಿಗೆ ಮುನ್ನ ನಾಲ್ಕು ನಿಗಮಗಳ ವಾಹನಗಳಲ್ಲಿ ಸರಾಸರಿ 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಪ್ರಸ್ತುತ ಈ ಸಂಖ್ಯೆಯು 108.70 ಲಕ್ಷಗಳಿಗೆ ಹೆಚ್ಚಳವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿ. ಅನ್ಬುಕುಮಾರ್, ಆರ್. ರಾಮಚಂದ್ರನ್, ಡಾ.ಕೆ. ನಂದಿನಿದೇವಿ, ಮಾಧ್ಯಮ ಮುಖ್ಯ ಸಂಪರ್ಕಾಧಿಕಾರಿ ಡಾ.ಲತಾ ಮತ್ತಿತರರು ಸಮಾರಂಭದಲ್ಲಿದ್ದರು.
20 ಹೊಸ ವೋಲ್ವೋ ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳು ಕುಂದಾಪುರ, ಮಂಗಳೂರು , ಕೆಂಪೇಗೌಡ ಅಂತರರಾಷ್ಟ್ರೀಯ
ವಿಮಾನ ನಿಲ್ದಾಣ, ನೆಲ್ಲೂರು, ಹೈದರಾಬಾದ್, ವಿಜಯವಾಡ, ಎರ್ನಾಕುಲಂ, ತ್ರಿಶೂರ್, ಕ್ಯಾಲಿಕಟ್ ನಡುವೆ ಸಂಚರಿಸಲಿವೆ.
ಈ ಬಸ್ 15 ಮೀಟರ್ ಉದ್ದವಿದ್ದು, 40 ಬರ್ತ್ 2×1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ನೀಡಲಿದೆ ಎಂದು ನಿಗಮ ತಿಳಿಸಿದೆ.
Actor Darshan ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ದರ್ಶನ್
Bigg Boss Kannada ಐಶಾರಾಮಿ ರೆಸಾರ್ಟ್ ಆಗಿ ಬದಲಾದ ಬಿಗ್ ಬಾಸ್ ಮನೆ; ದೊಡ್ಮನೆಯಲ್ಲಿ ಮತ್ತೊಮ್ಮೆ ಮಿತಿ ಮೀರಿದ ವರ್ತನೆ