newsics.com
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದೂರು ಪ್ರತಿದೂರು ಎರಡೂ ಕೇಸನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ.
ಬೆಳಗಾವಿ ಕಮಿಷನರ್ ಯಡಾ ಮಾರ್ಟಿನ್, ಸಿಟಿ ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ಪ್ರತ್ಯೇಕ ಎರಡು ಕೇಸಗಳನ್ನು ಸಿಐಡಿಗೆ ಹಸ್ತಾಂತರ ಮಾಡಿದ್ದಾರೆ.
ಸಿಟಿ ರವಿ ಅವಾಚ್ಯ ಶಬ್ದ ಬಳಸಿರೋದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ನೀಡಿದ್ದರು. ಅದೇ ವೇಳೆ ಸಿಟಿ ರವಿ ಕೂಡ ತನ್ನ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ದೂರು ನೀಡಿದ್ದರು. ಇದೀಗ ಈ ಎರಡೂ ಕೇಸ್‌ಗಳನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಪರಿಷತ್ ಕಾರ್ಯದರ್ಶಿ ನೀಡಿದ ದೂರಿನ್ವಯ ಹಿರೇಬಾಗೆವಾಡಿ ಠಾಣೆಯಲ್ಲಿ ಹತ್ತು ಜನ ಅನುಮಾನಿತರ ಮೇಲೆ ದಾಖಲಾಗಿದ್ದ ಸುಮೋಟೋ ಕೇಸ್ ಇದೀಗ ಸಿಐಡಿಗೆ ಬೆಳಗಾವಿ ಕಮಿಷನರ್ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ ಪ್ರಕರಣದಲ್ಲಿ ಸಿಟಿ ರವಿ ಅವರು ಪೊಲೀಸರಿಂದ ಬಂಧನ ನಂತರ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಸಿಟಿ ರವಿ ಸರ್ಕಾರ ಮತ್ತು ಪೊಲೀಸರ ವಿರುದ್ಧ ಕಿಡಿಕಾರಿದ್ದರು.
ಇದೀಗ ಸುವರ್ಣ ಸೌಧದಿಂದ ಬಂಧನವಾಗಿ ಬಿಡುಗಡೆವರೆಗೂ ನಡೆದ ಘಟನೆಯ ಬಗ್ಗೆ ಸಿಟಿ ರವಿ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಿದ ಬೆನ್ನಲ್ಲೇ ಸಿಟಿ ರವಿ ಕೂಡ ತನ್ನ ಬಂಧನದ ವಿರುದ್ಧ ದೂರು ನೀಡಿದ್ದಾರೆ.
ಪ್ರಕರಣದ ಬಗ್ಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಸಭಾಪತಿ ಬಸವರಾಜ್ ಹೊರಟ್ಟಿ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಪೊಲೀಸ್ ಮಹಾ ನಿರೀಕ್ಷಕರಿಗೆ ದೂರು ನೀಡಿದ್ದು, 7 ಪುಟಗಳ ವಿಸ್ತಾರವಾದ ದೂರಿನಲ್ಲಿ ಸಿಟಿ ರವಿ ಅವರು, ಸದನದಲ್ಲಿ ನಡೆದ ಘಟನೆ, ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಸಿಟಿ ರವಿ ಅವರು ಘಟನೆಯ ಬಗ್ಗೆ ಸಂಪೂರ್ಣವಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪರಿಷತ್ ಸದಸ್ಯರಾದ ಬೋಸರಾಜ್ ಸೇರಿದಂತೆ ಹಲವರು ತನ್ನ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ಸಿಟಿ ರವಿ ನೀಡಿದ್ದಾರೆ. ಸಭಾಪತಿಗಳಿಗೆ ಕೊಟ್ಟ ದೂರಿನಲ್ಲಿ ಪೊಲೀಸರಿಂದ ಹಕ್ಕುಚ್ಯುತಿ ಆಗಿರುವ ಬಗ್ಗೆಯೂ ಉಲ್ಲೇಖ ಮಾಡಿದ್ದು, ಜೀವ ಬೆದರಿಕೆ, ಮಾನಹಾನಿಯಾಗಿದೆ ಎಂದು ದೂರು ನೀಡಿದ್ದಾರೆ. ಅಲ್ಲದೇ, ಸಚಿವರ ಬೆಂಬಲಿಗರಿಂದ ಹಲ್ಲೆ ಯತ್ನ ನಡೆದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.