newsics.com
ಮಂಡ್ಯ: ಅಚ್ಚ ಕನ್ನಡ ಮಾತನಾಡುವ ಜಿಲ್ಲೆಯಲ್ಲಿ ನಡೆಯುತ್ತಿರುವ ನುಡಿ ಜಾತ್ರೆಗೆ ಸಕ್ಕರೆ ನಾಡು ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ.
ಸಮ್ಮೇಳನ ಉದ್ಘಾಟನೆಯ ಮುನ್ನಾ ದಿನವೂ ರಸ್ತೆ ಗುಂಡಿ ಮುಚ್ಚುವುದರಿಂದ ಹಿಡಿದು ವಾಹನಗಳ ನಿಲುಗಡೆ, ಸ್ವಚ್ಛತೆ ಸೇರಿದಂತೆ ಎಲ್ಲ ವ್ಯವಸ್ಥೆಗಳೂ ಅಂತಿಮ ಕ್ಷಣದವರೆಗೂ ನಡೆದವು.
ಐದಾರು ತಿಂಗಳ ಹಿಂದೆಯೇ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ಅಂತಿಮವಾಗಿತ್ತು. ಆದರೂ ಮಂಡ್ಯ ನಗರ ಸೇರಿದಂತೆ ಸಮ್ಮೇಳನ ನಡೆಯುವ ಸ್ಯಾಂಜೋ ಆಸ್ಪತ್ರೆಯ ಹಿಂಭಾಗದ ಸ್ಥಳದವರೆಗೂ ರಸ್ತೆ ಸರಿಪಡಿಸುವ ಕಸರತ್ತು ಸಮ್ಮೇಳನದ ಉದ್ಘಾಟನೆಯ ಮುನ್ನಾದಿನವೂ ನಡೆದಿತ್ತು.
ದೀಪಾಲಂಕಾರಕ್ಕೆ ಚಾಲನೆ:
ನಗರದ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಫ್ಲೆಕ್ಸ್ ಬ್ಯಾನರ್ಗಳ ಅಬ್ಬರ, ಕಣ್ಣಿಗೆ ರಾಚುವಷ್ಟು ಸಡಗರ, ಬಣ್ಣ ಬಣ್ಣದ ಸ್ವಾಗತ ಕಮಾನುಗಳು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿವೆ. ಅಲ್ಲಲ್ಲಿ ಮಂಡ್ಯದ ಅಸ್ಮಿತೆಯಂತಿರುವ ಕಬ್ಬಿನ ಜೊಲ್ಲೆಗಳನ್ನೇ ತಳಿರು ತೋರಣಕ್ಕೆ ಬಳಸಿ ಮಂಡ್ಯದ ಸೊಗಡನ್ನು ಪಸರಿಸಲಾಗಿದೆ. ಜತೆಗೆ ಜನಪದ ಕಲೆಗಳನ್ನು ಸಾರುವಂತಹ ಗೋಡೆ ಚಿತ್ರಗಳು, ನಗರದಿಂದ ಸಮ್ಮೇಳನದ ಸ್ಥಳದವರೆಗೂ ಕಣ್ಮನ ಕೋರೈಸುವ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಗೆ ಗುರುವಾರ ಸಂಜೆ ಚಾಲನೆ ನೀಡಲಾಗಿತ್ತು.
ಸಮ್ಮೇಳನ ಸ್ಥಳದ ವಹಾದ್ವಾರವನ್ನು ಕೆಆರ್ಎಸ್ ಅಣೆಕಟ್ಟೆಯ ಕ್ರೆಸ್ಟ್ಗೇಟ್ ಮಾದರಿಯಲ್ಲಿ ರೂಪಿಸಲಾಗಿದ್ದು, ಕಲಾವಿದನ ಕಲ್ಪನೆಯಲ್ಲಿ ಸೊಗಸಾಗಿ ಮೂಡಿಬಂದಿದೆ. ಸಮ್ಮೇಳನದಲ್ಲಿ ವೀರಶೈವ ಮಹಾಸಭಾದವರ ಮನವಿ ಮೇರೆಗೆ ಬಸವಣ್ಣನ ಪ್ರತಿಮೆಯನ್ನು ಮುಂಭಾಗದಲ್ಲಿ ಇರಿಸುವ ಮೂಲಕ ಅವರಿಗೂ ಗೌರವ ಸಲ್ಲಿಸಲಾಗಿದೆ.
ಗುಣಮಟ್ಟದ ಆಹಾರ:
ಮತ್ತೊಂದೆಡೆ ಊಟದ ವ್ಯವಸ್ಥೆಯನ್ನು ಕೂಡ ಮುತುವರ್ಜಿಯಿಂದ ನಿರ್ವಹಣೆ ಮಾಡಲು ಎಲ್ಲ ಸಿದ್ಧತೆ ನಡೆಸಿರುವುದನ್ನು ಕಾಣಬಹುದು. ಊಟಕ್ಕೆ 100 ಕೌಂಟರ್, ನೋಂದಾಯಿತ ಪ್ರತಿನಿಧಿಗಳಿಗೆ 40 ಕೌಂಟರ್ಗಳನ್ನು ತೆರೆಯಲಾಗಿದ್ದು ಎಲ್ಲರಿಗೂ ಒಂದೇ ರೀತಿಯ ಊಟ ಬಡಿಸುವುದು, ಆಹಾರದ ಗುಣಮಟ್ಟ ಪರೀಕ್ಷೆ ಮಾಡುವುದು, ನೀರನ್ನು ಸಹ ಪರೀಕ್ಷಿಸಿ ಒದಗಿಸುವುದು, ಸ್ವಚ್ಛತೆಗೆ 250 ಸಿಬ್ಬಂದಿ ನೇಮಕಗೊಂಡಿರುವುದು, 150ಕ್ಕೂ ಹೆಚ್ಚು ವಿವಿಧ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಿರುವುದು ಸೇರಿದಂತೆ ಎಲ್ಲೂ ಯಾವುದೇ ಲೋಪವಾಗದಂತೆ ಸಮ್ಮೇಳನದ ಆಯೋಜಕರು ಹಾಗೂ ಜಿಲ್ಲಾಡಳಿತ ವ್ಯವಸ್ಥಿತ ರೀತಿಯಲ್ಲಿ ಮಾಡಿರುವುದು ಕಂಡುಬಂತು.
Kannada Sahitya Sammelana ಇಂದಿನಿಂದ ಸಕ್ಕರೆ ನಾಡಲ್ಲಿ ಅಕ್ಕರೆಯ ಅಕ್ಷರ ಜಾತ್ರೆ