newsics.com
ಬೆಂಗಳೂರು: ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಅವರನ್ನು ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿದೆ.
ಎಂ.ಕೆ. ಜಗದೀಶ್ ಅವರ ವರ್ಗಾವಣೆ ಹಿಂದೆ ಕೇರಳ ರಾಜ್ಯದ ಲಾಬಿ ಇದೆವೆಂಬ ಅನುಮಾನ ಮೂಡಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ.
ಕೆಎಂಎಫ್ ಮಾರುಕಟ್ಟೆ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಗದೀಶ್ ನೇತೃತ್ವದಲ್ಲಿ ಐರ್ಲೆಂಡ್, ಸ್ಕಾಟ್ಲಾಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡುವುದು, ಐಎಸ್ಎಲ್ನಲ್ಲಿ ಬಿಎಫ್ಸಿ ತಂಡಕ್ಕೆ, ಪ್ರೊ ಕಬ್ಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಪ್ರಾಯೋಜಕತ್ವ ನೀಡಿ ಸದ್ದು ಮಾಡಿತ್ತು.
ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಲ್ಲದೆ ದುಬೈ, ಅಮೆರಿಕ ಸೇರಿದಂತೆ ವಿಶ್ವದ ಹಲವು ಕಡೆ ನಂದಿನಿ ಉತ್ಪನ್ನ ಸಿಗುವಂತೆ ಮಾಡುವ ಗುರಿ ಹೊಂದಿತ್ತು.
ತಿರುಪತಿ ಪ್ರಸಾದಕ್ಕೆ ಮತ್ತೆ ನಂದಿನಿ ತುಪ್ಪ ಪೂರೈಸುವ ಒಪ್ಪಂದ ಪಡೆದುಕೊಂಡಿದ್ದು ದೊಡ್ಡ ಗೆಲುವಾಗಿತ್ತು. ಇದೆಲ್ಲದರ ಹಿಂದೆ ಕೆಲಸ ಮಾಡಿದ್ದು ಎಂಡಿ ಎಂ.ಕೆ. ಜಗದೀಶ್. ಈಗ ನಂದಿನಿಯ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ ತರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಈ ಬೆನ್ನಲ್ಲೇ ಅವರನ್ನು ಸ್ಥಳ ತೋರಿಸದೆ ಏಕಾಏಕಿ ವರ್ಗಾವಣೆ ಮಾಡಲಾಗಿದೆ.
ಕೆಲವು ಖಾಸಗಿ ಕಂಪನಿಗಳು ನಂದಿನಿ ಇಡ್ಲಿ, ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬರದಂತೆ ತಡೆಯಲು ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ವರ್ಗಾವಣೆ ಮಾಡಿರುವುದಕ್ಕೆ ಕನ್ನಡಿಗರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಜಗದೀಶ್ ಅವರನ್ನು ದಿಢೀರನೆ ವರ್ಗಾವಣೆ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟ್ವೀಟ್ ಮಾಡಿದ್ದು, ನಂದಿನಿಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಕೆಎಂಎಫ್ ಎಂಡಿ ಜಗದೀಶ್ ಅವರನ್ನು ವರ್ಗಾವಣೆ ಮಾಡುವ ಮೂಲಕ ಕೇರಳ ಲಾಬಿಗೆ ಕೈಜೋಡಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಖಾಸಗಿ ಬ್ರಾಂಡ್ ಗಳನ್ನು ರಕ್ಷಿಸಲು ನಂದಿನಿಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Cyber Crime ಮಾಜಿ ಮಿಸ್ ಇಂಡಿಯಾ ಸುಂದರಿ ಡಿಜಿಟಲ್ ಅರೆಸ್ಟ್: 99 ಸಾವಿರ ರೂ. ಕಳೆದುಕೊಂಡ ಶಿವಂಕಿತಾ ದೀಕ್ಷಿತ್