newsics.com
ಬೆಂಗಳೂರು: ಬೆನ್ನು ನೋವಿನ ಚಿಕಿತ್ಸೆಗಾಗಿ ನಟ ದರ್ಶನ್ ಶುಕ್ರವಾರ ಬೆಂಗಳೂರಿನ ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಹಲವು ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ. ಪರೀಕ್ಷೆಗಳ ವರದಿ ಆಧರಿಸಿ, ವೈದ್ಯರೊಟ್ಟಿಗೆ ಚರ್ಚೆ ನಡೆಸಿ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಣಯವನ್ನು ದರ್ಶನ್ ಹಾಗೂ ಅವರ ಕುಟುಂಬ ತೆಗೆದುಕೊಳ್ಳಲಿದೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ಗೆ ವೈದ್ಯಕೀಯ ಚಿಕಿತ್ಸೆಗಾಗಿ ಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಈ ವಾರದಲ್ಲಿ ಹೈಕೋರ್ಟ್ಗೆ ದರ್ಶನ್ ಅವರು ತಮ್ಮ ವೈದ್ಯಕೀಯ ವರದಿಯನ್ನೂ ನೀಡಬೇಕಿದೆ.
ಬಿಜಿಎಸ್ ಆಸ್ಪತ್ರೆಗೆ ಬೆನ್ನುನೋವಿನ ಚಿಕಿತ್ಸೆಗಾಗಿ ದಾಖಲಾಗಿರುವ ಅವರನ್ನು ವಿವಿಧ ಪರೀಕ್ಷೆಗೆ ಒಳಪಡಿಸಲಿರುವ ವೈದ್ಯರು, ಆ ಬಳಿಕ ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಎರಡು ದಿನದ ಹಿಂದೆ ಬಳ್ಳಾರಿ ಜೈಲಿನಿಂದ ಮನೆಗೆ ಮರಳಿರುವ ದರ್ಶನ್ ಇನ್ನೂ ಆಸ್ಪತ್ರೆ ಕಡೆ ಮುಖ ಹಾಕಿಲ್ಲ. ಅಲ್ಲದೆ ಒಂದು ವಾರದಲ್ಲಿ ದರ್ಶನ್ರ ಚಿಕಿತ್ಸೆಯ ಮಾಹಿತಿ ನೀಡಬೇಕೆಂದು ನ್ಯಾಯಾಲಯ ಹೇಳಿದೆ. ಹೀಗಿದ್ದರೂ ದರ್ಶನ್ ಆಸ್ಪತ್ರೆಗೆ ಹೋಗದೇ ಇರುವುದು ಆಶ್ಚರ್ಯ ತರಿಸಿತ್ತು. ಆದರೆ ಇಂದು ದರ್ಶನ್ ಆಸ್ಪತ್ರೆಗೆ ತೆರಳಿದ್ದಾರೆ.
ನಿನ್ನೆ ಪತ್ನಿಯ ಮನೆಗೆ ತಮ್ಮ ವಾಹನಗಳನ್ನು ಸಹಾಯಕರಿಂದ ತರಿಸಿಕೊಂಡು ಎಲ್ಲ ವಾಹನಗಳಿಗೆ ಪೂಜೆ ಮಾಡಿದ್ದರು. ನಿನ್ನೆ ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬ ಸಹ ಇತ್ತಾದ್ದರಿಂದ ನಿನ್ನೆ ಆಸ್ಪತ್ರೆಗೆ ಹೋಗಿರಲಿಲ್ಲ. ಇಂದು ಅಮಾವಾಸ್ಯೆ ಇದ್ದು, ಅಮಾವಾಸ್ಯೆ ಮುಗಿಸಿಕೊಂಡು ಆಸ್ಪತ್ರೆಗೆ ಹೋಗಲಿದ್ದಾರೆ ಎನ್ನಲಾಗಿತ್ತು. ಆದರೆ ದರ್ಶನ್ ಅಮಾವಾಸ್ಯೆ ಮುಗಿಯುವ ಮುಂಚೆಯೇ ಆಸ್ಪತ್ರೆಗೆ ತೆರಳಿದ್ದಾರೆ.
ದರ್ಶನ್ ಈ ಹಿಂದೆಯೂ ಸಹ ಬಿಜಿಎಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದರು. 2013 ರಲ್ಲಿ ದರ್ಶನ್ ‘ಬೃಂದಾವನ’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಕುದುರೆ ಓಡಿಸುವಾಗ ಕುದುರೆಯಿಂದ ಬಿದ್ದು ಬೆನ್ನು ಹಾಗೂ ಕತ್ತಿನ ಭಾಗಕ್ಕೆ ಗಾಯ ಮಾಡಿಕೊಂಡಿದ್ದರು.
ಆಗ ಇದೇ ಬಿಜಿಎಸ್ಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲದೆ ಆಗ ಹಲವು ದಿನಗಳ ಕಾಲ ಕೊರಳಿಗೆ ಪಟ್ಟಿ ಕಟ್ಟಿಕೊಂಡು ಓಡಾಡುತ್ತಿದ್ದರು. ಈಗ ಮತ್ತೆ ಬಿಜಿಎಸ್ಗೆ ದಾಖಲಾಗಿದ್ದಾರೆ.
ತಿರುಪತಿಯಲ್ಲಿ ಹಿಂದೂಗಳು ಮಾತ್ರ ಕೆಲಸ ಮಾಡಬೇಕು: TTD ನೂತನ ಅಧ್ಯಕ್ಷ ಬಿ.ಆರ್ ನಾಯ್ಡು ಆದೇಶ