newsics.com
ಕೊಪ್ಪಳ: ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮೂವರಿಗೆ 5 ವರ್ಷ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪುನೀಡಿದೆ.
ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ (ಅ.24) ಮಹತ್ವದ ಆದೇಶ ಹೊರಡಿಸಿದೆ.
ಅಸ್ಪೃಶ್ಯತೆ ಆಚರಣೆ, ದಲಿತರ ಮೇಲಿನ ದೌರ್ಜನ್ಯ ಕಾರಣ ಪ್ರಕರಣ ದೇಶದ ಗಮನ ಸೆಳೆದಿತ್ತು. ಗಲಭೆಗೆ ಕಾರಣರಾದ 101 ಜನರ ವಿರುದ್ಧದ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಅಪರಾಧಿಗಳೆಂದು ತಿಳಿಸಿದೆ. 98 ಅಪರಾಧಿಗಳಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿದೆ.
ಮೂವರು ಎಸ್ಸಿ, ಎಸ್ಟಿ ವರ್ಗಕ್ಕೆ ಸೇರಿದ ಮೂವರು ಅಪರಾಧಿಗಳಿಗೆ ತಲಾ ಎರಡು ಸಾವಿರ ರೂ. ದಂಡ ಹಾಗೂ 5 ವರ್ಷ ಸಜೆ ವಿಧಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ್ ಅವರು ಅ.21ರಂದು 101 ಆರೋಪಿಗಳ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳೆಂದು ಘೋಷಿಸಿದ್ದರು. ಗುರುವಾರ ಶಿಕ್ಷೆ ಪ್ರಕಟಿಸಿ ಆದೇಶಿಸಿದರು.
ದೇಶಾದ್ಯಂತ ಗಮನ ಸೆಳೆದಿದ್ದ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ 2014ರಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ಗಲಾಟೆಗೆ ಕಾರಣವಾಗಿತ್ತು. 2014ರ ಆಗಸ್ಟ್ 28ರಂದು ಗಂಗಾವತಿ ನಗರದ ಶಿವೆ ಟಾಕೀಸ್ನಲ್ಲಿ ‘ಪವರ್’ ಸಿನಿಮಾ ವೀಕ್ಷಣೆಗೆ ತೆರಳಿದ್ದ ಮರಕುಂಬಿ ಗ್ರಾಮದ ಸವರ್ಣೀಯ ಮಂಜುನಾಥ ಹಾಗೂ ಇತರರ ನಡುವೆ ಗಲಾಟೆ ನಡೆದಿತ್ತು.
ಇದೇ ವಿಚಾರಕ್ಕೆ ಗ್ರಾಮದಲ್ಲಿ ಸವರ್ಣೀಯರು ದಲಿತರ ಮೇಲೆ ಹಲ್ಲೆ ನಡೆಸಿ, ನಾಲ್ಕು ಗುಡಿಸಲಿಗೆ ಬೆಂಕಿ ಹಚ್ಚಿದ್ದರು. ಈ ಕುರಿತು 117 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ ಕೆಲವರು ಮರಣ ಹೊಂದಿದ್ದು, ಕೆಲವರ ಹೆಸರು ಪುನರಾವರ್ತನೆ ಆಗಿವೆ ಎಂದು ಹೇಳಲಾಗಿದೆ.
ತೆರಿಗೆ ವಂಚನೆ: 700 GST ಅಧಿಕಾರಿಗಳಿಂದ 78 ಕಡೆ ದಾಳಿ, 75 ಕೋಟಿ ಮೌಲ್ಯದ 104 ಕೆಜಿ ಚಿನ್ನ ವಶ