newsics.com
ಮುಂಬೈ: ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ ರತನ್ ಟಾಟಾ ಗುರುವಾರ ಸಂಜೆ ಪಂಚಭೂತಗಳಲ್ಲಿ ಲೀನರಾದರು.
ಈ ಮೂಲಕ ಜನೋಪಕಾರಿ ಮೇರು ಉದ್ಯಮಿ, ಭಾರತದ ರತ್ನ ರತನ್ ಟಾಟಾ ಜನಮಾನಸದ ನೆನಪಿನಂಗಳಕ್ಕೆ ಜಾರಿದರು.
ಪಾರ್ಸಿ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತಾದರೂ ರತನ್ ಟಾಟಾ ಅವರ ಇಚ್ಛೆಯಂತೆ ಪಾರ್ಥಿವ ಶರೀರವನ್ನು ದಹನ ಮಾಡಲಾಯಿತು ಎಂದು ಸ್ಮಶಾನದಲ್ಲಿದ್ದ ಅರ್ಚಕರೊಬ್ಬರು ತಿಳಿಸಿದ್ದಾರೆ.
ಧೀಮಂತ ಉದ್ಯಮಿ-ಪರೋಪಕಾರಿ ರತನ್ ಟಾಟಾ ಅವರ ಅಂತ್ಯಕ್ರಿಯೆಯನ್ನು ಮುಂಬೈನ ವರ್ಲಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನೆರವೇರಿಸಲಾಯಿತು. ಈ ವೇಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನಡೆದವು. ಮುಂಬೈ ಪೊಲೀಸರು ಟಾಟಾ ಅವರಿಗೆ ಗನ್ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಾಣಿಜ್ಯ ಸಚಿವ ಪೀಯುಶ್ ಗೋಯಲ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಂತ್ಯಕ್ರಿಯೆಯ ನಂತರ, ದಕ್ಷಿಣ ಮುಂಬೈನ ಕೊಲಾಬಾದಲ್ಲಿರುವ ದಿವಂಗತ ಕೈಗಾರಿಕೋದ್ಯಮಿಯ ಬಂಗಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಅರ್ಚಕರು ತಿಳಿಸಿದರು.
ಮಲಸಹೋದರ ನೋಯೆಲ್ ಟಾಟಾ ಸೇರಿದಂತೆ ಉದ್ಯಮ ದಿಗ್ಗಜರ ಕುಟುಂಬದ ಸದಸ್ಯರು ಮತ್ತು ಟಾಟಾ ಗ್ರೂಪ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರಂತಹ ಉನ್ನತ ಅಧಿಕಾರಿಗಳು ವರ್ಲಿಯಲ್ಲಿರುವ ಸ್ಮಶಾನದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಮಹಾರಾಷ್ಟ್ರ ಸರ್ಕಾರ ರತನ್ ಟಾಟಾಗೆ ಗೌರವಾರ್ಥ ಒಂದು ದಿನ ಶೋಕಾಚರಣೆ ಘೋಷಿಸಿತ್ತು. ದಕ್ಷಿಣ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್ಸಿಪಿಎ) ಕೇಂದ್ರದಲ್ಲಿ ರತನ್ ಟಾಟಾ ಅವರ ಪಾರ್ಥೀವ ಶರೀರದ ದರ್ಶನ ಪಡೆಯಲು ಸಾಗರದಂತೆ ಜನರು ಸೇರಿದ್ದರು.
ಅವಿವಾಹಿತರಾಗಿರುವ ರತನ್ ಟಾಟಾ ಅವರಿಗೆ ಮಕ್ಕಳಿಲ್ಲ. ಅವರ ತಂದೆಯ ಎರಡನೇ ಪತ್ನಿಯ ಮಗನ ಮೂವರು ಮಕ್ಕಳಲ್ಲಿ ಒಬ್ಬರಿಗೆ ಟಾಟಾ ಗ್ರೂಪ್ ಚುಕ್ಕಾಣಿ ಸಿಗಬಹುದು ಎನ್ನಲಾಗುತ್ತಿದೆ.
ರತನ್ ಟಾಟಾ ಅವರ ನ್ಯಾನೋ ಕಾರಿಗೆ ಸ್ಪೂರ್ತಿಯಾಗಿದ್ದು ಆ ಘಟನೆ; ನಿಮಗೆ ಗೊತ್ತಿರದ ಕಥೆ!
55 ವರ್ಷ ಕಿರಿಯ ವ್ಯಕ್ತಿ ಜತೆ ರತನ್ ಟಾಟಾ ಸ್ನೇಹ! ಆಪ್ತ ಗೆಳೆಯನ ನಡುವಿನ ಬಂಧ ಶುರುವಾಗಿದ್ದು ಹೇಗೆ..?