newsics.com
ರಾಷ್ಟ್ರೀಯವಾದಿ ಉದ್ಯಮಿ ರತನ್ ಟಾಟಾ ದೇಶದ ಅಭಿವೃದ್ಧಿಗೆ ಅನುಕೂಲವಾಗುವ ಕೆಲಸಗಳಿಗೆ ಸದಾ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿತ್ವ. ಅಷ್ಟರಮಟ್ಟಿಗೆ ಭಾರತದಲ್ಲಿ ಬೇರೂರಿರುವ ಉದ್ಯಮ. ಇನ್ನು ದಿವಂಗತ ರತನ್ ಟಾಟಾ ಅವರಿಗೆ ಕರ್ನಾಟಕದ ಬಗ್ಗೆ ಭಾರೀ ಒಲವಿತ್ತು. ಹೂಡಿಕೆ ಮಾಡಲು ಕರ್ನಾಟಕ ಪ್ರಶಸ್ತ ಸ್ಥಳ ಎನ್ನುತ್ತಿದ್ದರು.
ಇನ್ನು ರತನ್ ಟಾಟಾ ಅವರಿಗೆ ಬೆಂಗಳೂರಿನಲ್ಲಿ ನಡೆಯುವ ಏರೋಶೋಗಳೆಂದರೆ ಬಹಳ ಪ್ರಿಯ. ಯಲಹಂಕದ ವಾಯು ನೆಲೆಯಲ್ಲಿ ನಡೆಯುವ ಈ ಏರೋ ಶೋನಲ್ಲಿ ಅವರು ಫೈಟರ್ ಜೆಟ್ ಗಳನ್ನು ಏರಿ ಹೋಗುತ್ತಿದ್ದರು. ಇಳಿವಯಸ್ಸಿನಲ್ಲೂ ಅವರು ಸಮರ ಸೇನಾನಿಯಂತೆ ಭಾಸವಾಗುತ್ತಿತ್ತು. ಫೈಟರ್ ಜೆಟ್ ನಲ್ಲಿ ಕೂತು ಅದನ್ನು ಚಲಾಯಿಸುವುದಕ್ಕೆ ಚಾಲಾಕಿತನದ ಜೊತೆಗೆ ಗಂಡೆದೆಯೂ ಬೇಕು. ಇಂಥ ರೈಡ್ ಗಳನ್ನು ರತನ್ ಬಹಳ ಇಷ್ಟಪಡುತ್ತಿದ್ದರು.
ಉದ್ಯಮದ ಹೊರತಾಗಿ ತಮ್ಮ ಕೊಡುಗೈ ದಾನದಿಂದಲೂ ಜನಪ್ರಿಯರಾಗಿರುವ ರತನ್ ಟಾಟಾ ಹಿಂದೊಮ್ಮೆ ಎಫ್ -16 ಪೈಟರ್ ಜೆಟ್ ಹಾರಿಸಿ ಅಚ್ಚರಿ ಮೂಡಿಸಿದ್ದರು.
ಹೌದು, 2007ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಯಾರೂ ಊಹಿಸದ ಅಚ್ಚರಿಯೊಂದು ಎದುರಾಯಿತು. 70 ವರ್ಷದ ರತನ್ ಟಾಟಾ ಅವರು ತಮ್ಮ ಇಳಿ ವಯಸ್ಸನ್ನೂ ಲೆಕ್ಕಿಸದೆ ಗಂಟೆಗೆ 2,000 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಚಲಿಸಬಲ್ಲ ಎಫ್-16 ಫೈಟರ್ ಜೆಟ್ ಅನ್ನು ಹಾರಿಸಿದ್ದರು. ಇದನ್ನು ಅಮೆರಿಕ ರಕ್ಷಣಾ ಗುತ್ತಿಗೆದಾರ ಲಾಕ್ಹೀಡ್ ಮಾರ್ಟಿನ್ ಕಮಾಂಡ್ ಮಾಡಿದ್ದರು. ರತನ್ ಟಾಟಾ ಸಹ-ಪೈಲಟ್ ಆಗಿದ್ದರು.
2011 ರಲ್ಲಿ ಇಂಥದ್ದೇ ಒಂದು ಶೋನಲ್ಲಿ ಅವರು ಎಫ್-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ಅನ್ನು ಚಲಾಯಿಸಿದ್ದರು. 2020ರಲ್ಲಿ ಅವರು ಈ ಸಂದರ್ಭವನ್ನು ಮೆಲುಕು ಹಾಕುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಒಂಬತ್ತು ವರ್ಷದ ಹಿಂದಿನ ಆ ಘಟನೆ ಈ ದಶಕದ ತನ್ನ ಅವಿಸ್ಮರಣೀಯ ಸಂದರ್ಭ ಎಂದು ಹೇಳಿದ್ದರು. ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಟಾಟಾ ಗ್ರೂಪ್ ನಿಂದ ಹಲವು ಯೋಜನೆಗಳು ಚಾಲನೆಯಲ್ಲಿವೆ.
ರತನ್ ಟಾಟಾ ಭಾರತದ ಅತ್ಯಂತ ಯಶಸ್ವಿ ಉದ್ಯಮಿ ಮಾತ್ರವಲ್ಲದೆ ಒಬ್ಬ ಮಹಾನ್ ಲೋಕೋಪಕಾರಿ ಮತ್ತು ಸಮಾಜ ಸೇವಕ. ಟಾಟಾ ಟ್ರಸ್ಟ್ ಮೂಲಕ ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ 10 ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದ್ದರು. ಈ ಆಸ್ಪತ್ರೆಗಳು ಬಡವರಿಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಚಿಕಿತ್ಸಾ ಆಯ್ಕೆಗಳನ್ನು ಒದಗಿಸುತ್ತವೆ.
Reminiscence of Rathan Tata | ಪ್ರತಿ ಭಾರತೀಯನ ಬದುಕಲ್ಲಿ ಹಾಸುಹೊಕ್ಕಾಗಿರುವ ಟಾಟಾ ಬ್ರ್ಯಾಂಡ್