newsics.com /ನ್ಯೂಸಿಕ್ಸ್
ಮೈಸೂರು: ಪಬ್ ವೊಂದರಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವದಹನವಾಗಿರುವ ಘಟನೆ ಮೈಸೂರಿನ ರಿಂಗ್ ರಸ್ತೆಯಲ್ಲಿ ನಡೆದಿದೆ. ದಟ್ಟಗಳ್ಳಿಯ ರಿಂಗ್ ರಸ್ತೆ ಬಳಿಯಿರುವ ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಇಬ್ಬರು ಸುಟ್ಟು ಕರಕಲಾಗಿದ್ದು 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಡೀ ಪಬ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಮೃತರನ್ನು ಸಾಹಿಲ್ ಮತ್ತು ಪ್ರಕಾಶ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡ ಸಂದರ್ಭದಲ್ಲಿ ಪಬ್ ನಲ್ಲಿ 25ಕ್ಕೂ ಹೆಚ್ಚು ಜನರಿದ್ದರು. ಸದ್ಯ 15 ಜನರನ್ನು ರಕ್ಷಿಸಲಾಗಿದ್ದು 7 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸುಯೋಗ ಹಾಗೂ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಲ್ಲಿ ಪಬ್ ಮಾಲೀಕ ಸ್ಯಾಂಡಲ್‌ವುಡ್ ನಟ ಪ್ರೀತಂ ಪುಮೀತ್ ಮತ್ತು ಅವರ ಸ್ನೇಹಿತ ಅವಿನಾಶ್ ಸೇರಿದಂತೆ ಐವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ಪ್ರೀತಂ ಕೈ ಹಾಗೂ ಮುಖದ ಭಾಗಕ್ಕೆ ಗಂಭೀರ ಸುಟ್ಟ ಗಾಯಗಳಾಗಿವೆ. ಗೆಳೆಯ ಅವಿನಾಶ್ (27 ವರ್ಷ) ತಲೆಯ ಭಾಗಕ್ಕೆ ತೀವ್ರವಾಗಿ ಸುಟ್ಟ ಗಾಯಗಳಾಗಿವೆ. ಇನ್ನು ಪಬ್‌ಗೆ ಬಂದಿದ್ದ ಸೋನು (25 ವರ್ಷ), ರಮೇಶ್ (25 ವರ್ಷ), ಮಹದೇವಪ್ರಸಾದ್ (32 ವರ್ಷ), ಮತ್ತು ಪ್ರಜ್ವಲ್ (26 ವರ್ಷ) ಎಂಬುವವರಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕನ್ನಡದ ‘ಬ್ರಹ್ಮ ವಿಷ್ಣು ಮಹೇಶ್ವರ’ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದ ಪ್ರೀತಂ ಪುಮೀತ್, ಮೈಸೂರು ನಗರದ ಆರ್.ಟಿ.ನಗರದ ದಟ್ಟಗಳ್ಳಿ ಸಮೀಪ ‘ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್’ (Fox Den Liquor Garage) ಹೆಸರಿನ ರೆಸ್ಟೋ ಪಬ್ ನಡೆಸುತ್ತಿದ್ದರು. ಈ ಹಿಂದೆ ಶ್ರೀರಂಗಪಟ್ಟಣದ ಬಳಿ ‘ರಿವರ್ ರಾಂಚ್’ ರೆಸಾರ್ಟ್ ನಡೆಸುತ್ತಿದ್ದ ಇವರು, ಇತ್ತೀಚೆಗೆ ದಕ್ಷಿಣ ಆಫ್ರಿಕಾದ ವಿಶಿಷ್ಟ ‘ಮಾರಾ’ (Mara) ಬುಡಕಟ್ಟು ಜನಾಂಗದ ಶೈಲಿಯಲ್ಲಿ ಈ ಹೊಸ ರೆಸ್ಟೋ ಬಾರ್ ಅನ್ನು ವಿನ್ಯಾಸಗೊಳಿಸಿ ಆರಂಭಿಸಿದ್ದರು.