newsics.com
ಬೆಂಗಳೂರು: ನಗರದಲ್ಲಿ ನೀರಿನ ದರ ಹೆಚ್ಚಳ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಸುಳಿವು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ ಹೆಚ್ಚಿದ್ದು, ಬಸ್ ಪ್ರಯಾಣ ದರವನ್ನು ಶೇ.25ರಷ್ಟು ಹೆಚ್ಚಳ ಮಾಡುವಂತೆ ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ ಎಂದರು.
ಸಾರಿಗೆ ನಿಗಮಗಳ ಪ್ರಸ್ತಾವನೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಎಲ್ಲವನ್ನೂ ಪರಿಶೀಲಿಸಿ ಸಾರ್ವಜನಿಕರಿಗೆ ಹೊರೆಯಾಗದಂತೆ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಸಾರಿಗೆ ಸಂಸ್ಥೆಯ ನಿಗಮಗಳು ಶೇ.25ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಶೇ.25ರಷ್ಟು ಪ್ರಯಾಣ ದರ ಏರಿಕೆಗೆ ಒಪ್ಪುವ ಸಾಧ್ಯತೆಗಳು ಕಡಿಮೆಯಿದ್ದು, ಶೇ.12ರಿಂದ 15ರಷ್ಟು ಪ್ರಯಾಣ ದರ ಏರಿಕೆಗೆ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಡೀಸೆಲ್ ದರ ಹೆಚ್ಚಳ ಜತೆಗೆ ಬಸ್‌ಗಳ ಬಿಡಿ ಭಾಗಗಳ ದರ ಹೆಚ್ಚಳವಾಗಿತ್ತು. ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನದಲ್ಲೂ ಸಾಕಷ್ಟು ಹೆಚ್ಚಳವಾಗಿದೆ. ಹಾಗಾಗಿ ಈ ಹೊರೆ ಸರಿದೂಗಿಸಲು ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಲಿದೆ ಎಂಬ ಸುಳಿವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ.