newsics.com
ಬೆಂಗಳೂರು: ಪಿಕ್ಆಪ್ ಶುಲ್ಕ ಸೇರಿ ಇತರೆ ಶುಲ್ಕ ಹೆಚ್ಚಳವಾಗುತ್ತಿರುವ ಕಾರಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್ ಪ್ರಯಾಣ ಇನ್ನಷ್ಟು ದುಬಾರಿಯಾಗಲಿದೆ.
ಶೇಕಡಾ 20ರಿಂದ 40 ರಷ್ಟು ಹೆಚ್ಚಳ ಕಾಣಲಿದ್ದು ಅಂದಾಜು 43 ರೂಪಾಯಿಯಿಂದ 76 ರೂಪಾಯಿವರೆಗೆ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ಕಂಪನಿ ತನ್ನ ನಿಲ್ದಾಣದ ವ್ಯಾಪ್ತಿಯಲ್ಲಿ ಟ್ಯಾಕ್ಸಿ ಸೇವಾ ಶುಲ್ಕ, ಪಿಕ್ಆಪ್ ಶುಲ್ಕ ಸೇರಿ ಇತರೆ ಶುಲ್ಕಗಳನ್ನು ಹೆಚ್ಚಳ ಮಾಡುತ್ತಿರುವ ಕಾರಣ ವಿಮಾನ ನಿಲ್ದಾಣಕ್ಕೆ ಸಂಚಾರ ಸೇವೆ ಒದಗಿಸುವ ಓಲಾ, ಉಬರ್, ಕೆಎಸ್‌ಟಿಡಿಸಿ ಸೇರಿ ಎಲ್ಲ ಕ್ಯಾಬ್ ಸೇವೆಯೂ ದುಬಾರಿ ಆಗಲಿದೆ ಎಂದು ತಿಳಿದು ಬಂದಿದೆ.
ವಿವಿಧ ಖಾಸಗಿ ಕ್ಯಾಬ್ ಕಂಪನಿಗಳು ಹೊಂದಿರುವ ಒಪ್ಪಂದದ ಕರಾರು ಸೆಪ್ಟೆಂಬರ್ 30ರೊಳಗೆ ನವೀಕರಣಗೊಳ್ಳಲಿದೆ. ಆ ನಂತರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಗ್ರಾಹಕರು ಪ್ರಯಾಣ ಶುಲ್ಕದೊಂದಿಗೆ ಟ್ಯಾಕ್ಸ್, ಕಮಿಷನ್, ವಿಮಾನ ನಿಲ್ದಾಣ ವಿಧಿಸುವ ಶುಲ್ಕ ವನ್ನೂ ಸೇರಿಸಿ ಒಟ್ಟು ಬಿಲ್ ಪಾವತಿಸಬೇಕಾಗಿದೆ.
ಮೂಲಗಳ ಪ್ರಕಾರ, ಓಲಾ 172 ರೂಪಾಯಿಯಿಂದ 215 ರೂಪಾಯಿ ಮತ್ತು ಉಬರ್ 230 ರೂಪಾಯಿಯಿಂದ 260 ರೂಪಾಯಿಗೆ ಹೆಚ್ಚಿಸಲಿವೆ. ಈ ಹೊಸ ದರ ಮುಂದಿನ ಮೂರು ವರ್ಷಗಳವರೆಗೆ ಜಾರಿಯಲ್ಲಿರಲಿದೆ. ಜುಲೈನಲ್ಲಿ 685 ರೂಪಾಯಿ ಪಾವತಿಸುತ್ತಿದ್ದವರು ಆಗಸ್ಟ್ ನಲ್ಲಿ 750 ರೂಪಾಯಿ ಕೊಟ್ಟಿರುವುದಾಗಿ ಅನೇಕ ಪ್ರಯಾಣಿಕರು ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಬಿಎಂಟಿಸಿ ಸೇವೆಯಾದ ವಾಯುವಜ್ರ ಬಸ್‌ನಲ್ಲಿ ಎಂಜಿ ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ 252 ರೂಪಾಯಿ ದರವಿದ್ದು, ಇದೀಗ ಹೆಚ್ಚಳವಾಗಲಿದೆ.