newsics.com | ನ್ಯೂಸಿಕ್ಸ್
ಹಾಸನ: ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ಸಮಾಧಿ ಮಾಡಿರುವ ಹರದನಹಳ್ಳಿ ಸಮೀಪದ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಪ್ರದೇಶವನ್ನು ಧಾರ್ಮಿಕ, ಸಮಾಜ ಸುಧಾರಣೆ ಹಾಗೂ ದೇಶಕ್ಕೇ ಮಾದರಿಯಾದ ಆಕರ್ಷಣೀಯ ಪ್ರೇಕ್ಷಣೀಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ 300 ಕೋಟಿ ರೂ.ಅಂದಾಜಿನ ನೀಲನಕ್ಷೆ ಸಿದ್ಧವಾಗಿದೆ.
ಚನ್ನಮ್ಮ ಅವರ ಪುತ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೇ ಈ ಯೋಜನೆ ಬಗ್ಗೆ ಸುಳಿವು ನೀಡಿದ್ದು, ಚನ್ನಮ್ಮ ಅವರ 11ನೇ ದಿನದ ಕಾರ್ಯ ನಡೆಯುವ ಜು.30ರಂದು ಬೃಹತ್ ಯೋಜನೆಯ ರೂಪುರೇಷೆ ಪ್ರಕಟಿಸುವ ಸಾಧ್ಯತೆಯಿದೆ.
ಬೆಟ್ಟಕ್ಕೆ ಕೇಬಲ್ ಕಾರ್?
ಈಗ ಹೊಸದಾಗಿ ನಿರ್ಮಾಣವಾಗಿರುವ ನೀಲ ನಕ್ಷೆಯಲ್ಲಿ ಚನ್ನಮ್ಮ ಅವರ ಸಮಾಧಿಯ ಸ್ಥಳ ಸೇರಿ ಬೆಟ್ಟದ ತಪ್ಪಲನ್ನು ದೆಹಲಿಯ ರಾಜ್ ಘಾಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದರ ಜತೆಗೆ ಸುಮಾರು 450 ಎಕರೆಯಿರುವ ಬೆಟ್ಟದಲ್ಲಿ ಹೂವು, ಹಣ್ಣಿನ ಗಿಡಗಳನ್ನು ವಿಶೇಷವಾಗಿ ಈ ಪರಿಸರಕ್ಕೆ ಹೊಂದಿಕೊಳ್ಳುವ ನೂರಾರು ವರ್ಷ ಬಾಳುವ ಗಿಡಗಳನ್ನು ನೆಟ್ಟು ಬೆಳೆಸುವುದು, ಬೆಟ್ಟದಲ್ಲಿ ನಿತ್ಯವೂ ಅನ್ನದಾಸೋಹಕ್ಕೆ ವ್ಯವಸ್ಥೆ, ಅದಕ್ಕೆ ಬೇಕಾದ ದಾಸೋಹ ಭವನದ ನಿರ್ಮಾಣ, ಬೆಟ್ಟಕ್ಕೆ ಕೇಬಲ್ ಕಾರ್ ನಿರ್ಮಾಣವೂ ನೀಲ ನಕ್ಷೆಯಲ್ಲಿ ಸೇರಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಚನ್ನಮ್ಮ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಸುಂದರ ಸ್ಮಾರಕ ನಿರ್ಮಿಸಿ ಧಾರ್ಮಿಕ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ತಾಯಿಯ ಹೆಸರನ್ನು ಚಿರಸ್ಥಾಯಿಯಾಗಿಸಲು ಪುತ್ರರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಸೇರಿದಂತೆ ಇಡೀ ಕುಟುಂಬ ಸಂಕಲ್ಪ ಮಾಡಿದೆ.
300 ಕೋಟಿ ರೂ. ವೆಚ್ಚ:
ಬೆಟ್ಟದ ತಪ್ಪಲಿನ 24 ಎಕರೆ ಪ್ರದೇಶದಲ್ಲಿ ಸುಂದರ ಸ್ಮಾರಕ ನಿರ್ಮಿಸಲು ಅಂದಾಜು 300 ಕೋಟಿ ವೆಚ್ಚದ ಯೋಜನೆ ಸಿದ್ಧವಾಗುತ್ತಿದೆ. ಜಮೀನು-ತೋಟದ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಈಗಾಗಲೇ ಒಪ್ಪಂದ ಕರಾರು ಮಾಡಿಕೊಂಡು ಮುಂಗಡ ಹಣವನ್ನು ಸಹ ಸಂದಾಯ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಚನ್ನಮ್ಮ ಶನಿವಾರ ಇಹಲೋಕ ತ್ಯಜಿಸುತ್ತಿದ್ದಂತೆ, ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನು ಮಾಲೀಕರೊಂದಿಗೆ ರಾತ್ರೊರಾತ್ರಿ ಸಭೆ ನಡೆಸಿ, ತೆಂಗು, ಅಡಕೆ ತೋಟವನ್ನು ಗುಂಟೆಗೆ 2.25 ಲಕ್ಷ ರೂ. ಗದ್ದೆಗೆ 1.50 ಲಕ್ಷ ರೂ.ನಂತೆ ದರ ನಿಗದಿಪಡಿಸಲಾಗಿದೆ ಎನ್ನುತ್ತಾರೆ ರೈತರು.
ರೈತರಿಂದ ಜಾಗವನ್ನು ಸ್ವಾಧೀನಕ್ಕೆ ಪಡೆದು ಹಗಲಿರುಳು ನೂರಾರು ಕಾರ್ಮಿಕರಿಂದ ಸಮತಟ್ಟು ಮಾಡಿಸಿ ಚೆನ್ನಮ್ಮ ಅವರ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆ ಸ್ಥಳದಲ್ಲಿ ಕಾಂಪೌಂಡ್ ನಿರ್ಮಾಣದ ಕೆಲಸವೂ ಆಗಿದೆ.
ಸ್ಮಾರಕ ನಿರ್ಮಾಣ ಸಂಬಂಧ ಪ್ರಸಿದ್ಧ ವಾಸ್ತುಶಿಲ್ಪಿಗಳಿಂದ 300 ಕೋಟಿ ವೆಚ್ಚದ ಯೋಜನೆ ಈಗಾಗಲೇ ರೂಪುಗೊಳ್ಳುತ್ತಿದೆ. 11ನೇ ದಿನದ ಕಾರ್ಯದ ವೇಳೆ ಸ್ಮಾರಕ ನಿರ್ಮಾಣ ಕುರಿತಂತೆ ನಾನೇ ಪ್ರಕಟಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಇಲ್ಲಿ ಚನ್ನಮ್ಮ ಅವರ ಸ್ಮಾರಕ ಮಾತ್ರವಲ್ಲ. ತಾಯಿಯ ನಿಸ್ವಾರ್ಥ ಪ್ರೀತಿ, ಸಹನೆ, ತ್ಯಾಗ ಹಾಗೂ ಕರುಣೆ ಸಂದೇಶವನ್ನು ಸಾರುವ ಶಾಂತಿಯ ತೋಟವಾಗಿ ಕಂಗೊಳಿಸಲಿದೆ. ಇಂದಿನ ಯುವ ಜನತೆಗೆ ತಂದೆ-ತಾಯಿಯ ಮಹತ್ವದ ಬಗ್ಗೆ ತಿಳಿಸಲು ಹಾಗೂ ಸರ್ವ ಜನಾಂಗದವರೂ ಬಂದು ವೀಕ್ಷಿಸಬಹುದಾದ ಐತಿಹಾಸಿಕ ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಪಡಿಸುವ ಕುರಿತು ಕುಟುಂಬ ತೀರ್ಮಾನಿಸಿದೆ.
ಟ್ರಸ್ಟ್ ರಚನೆ
ಈಗಾಗಲೇ 10 ಎಕರೆಗೂ ಹೆಚ್ಚು ಜಾಗ ಖರೀದಿಯಾಗಿದ್ದು, ಸಮಾಧಿ ಸ್ಥಳದ ಸುತ್ತಮುತ್ತ ಹತ್ತಾರು ಎಕರೆ ಖರೀದಿಸಿ ಅಲ್ಲಿ ಸ್ಮೃತಿ ವನ ನಿರ್ಮಾಣ, ಸಂಸ್ಕೃತ ಪಾಠಶಾಲೆ ಸೇರಿ ಶೈಕ್ಷಣಿಕ ಪೂರಕ ಯೋಜನೆ, ಮಾಜಿ ಪ್ರಧಾನಿ ದೇವೇಗೌಡರ ಹುಟ್ಟಿನಿಂದ ಅವರ ಹೋರಾಟ, ರಾಜಕೀಯ ಜೀವನ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ನಾಡಿಗೆ ನೀಡಿದ ಕೊಡುಗೆ ಸೇರಿದಂತೆ ಸಮಗ್ರ ವಿವರಗಳನ್ನೊಳಗೊಂಡ ಮ್ಯೂಸಿಯಂ, ತಪ್ಪಲಿನಲ್ಲಿರುವ ಕೆರೆಯನ್ನೂ ಅಭಿವೃದ್ಧಿಪಡಿಸಿ ಅಲ್ಲಿ ದೋಣಿ ವಿಹಾರ ಸೇರಿ ಹಲವು ಯೋಜನೆಗಳಿವೆ. ಇವೆಲ್ಲವನ್ನೂ ಹಂತ, ಹಂತವಾಗಿ ಅನುಷ್ಠಾನಗೊಳಿಸುವ ಉದ್ದೇಶವಿದ್ದು, ಅದಕ್ಕಾಗಿ ರಾಜಕೀಯ ಹೊರತಾದ ಹಾಗೂ ದೇವೇಗೌಡರ ಕುಟುಂಬದ ಹೊರತಾದ ಟ್ರಸ್ಟ್ ರಚನೆ ಮಾಡುವ ಪ್ರಯತ್ನ ನಡೆದಿವೆ ಎಂದು ತಿಳಿದುಬಂದಿದೆ.
Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ