newsics.com | ನ್ಯೂಸಿಕ್ಸ್
ಬೆಂಗಳೂರು: ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಮಹಾರಾಷ್ಟ್ರ ಕ್ರಿಕೆಟ್ ತಂಡದ ಯುವ ಆಟಗಾರನನ್ನು ವಿಡಿಯೋ ಕರೆಯಲ್ಲಿ ಪ್ರಚೋದಿಸಿ ನಗ್ನಗೊಳಿಸುವಂತೆ ಮಾಡಿ ಬಳಿಕ ವಿಡಿಯೋ ರೆಕಾರ್ಡ್ ಮಾಡಿಕೊಂಡ ಯುವತಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ಮೂಲದ 20 ವರ್ಷದ ಕ್ರಿಕೆಟಿಗ ನೀಡಿದ ದೂರಿನ ಮೇರೆಗೆ ಯುವತಿ ವಿರುದ್ಧ ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 17 ರಂದು ಕಣ್ಣೂರಿನ ಬಳಿ ಪಂಚತಾರಾ ಹೊಟೇಲ್ನಲ್ಲಿ ಇರುವಾಗ ಈ ಘಟನೆ ನಡೆದಿದೆ. ಸದ್ಯ ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆ ಹಿನ್ನೆಲೆಯಲ್ಲಿ ಯುವ ಕ್ರಿಕೆಟಿಗ ಮಹಾರಾಷ್ಟ್ರದಿಂದ ನಗರಕ್ಕೆ ಬಂದು ಕಣ್ಣೂರಿನ ಪಂಚತಾರ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಡೇಟಿಂಗ್ ಆ್ಯಪ್ನಲ್ಲಿ ನೋಂದಾಯಿಸಿಕೊಂಡಿದ್ದ ಆಟಗಾರನಿಗೆ ಜುಲೈ 17ರಂದು ರಾತ್ರಿ ಅಪರಿಚಿತ ಮಹಿಳೆಯಿಂದ ಮೆಸೇಜ್ ಬಂದಿದೆ. ವಾಟ್ಸ್ಆ್ಯಪ್ ಕರೆಯಲ್ಲಿ ಮಾತನಾಡುವಂತೆ ಹೇಳಿ ತನ್ನ ನಂಬರ್ ಶೇರ್ ಮಾಡಿದ್ದಳು. ಬಳಿಕ ಇಬ್ಬರು ವಾಟ್ಸ್ಆ್ಯಪ್ ವಿಡಿಯೋ ಕರೆಯಲ್ಲಿ ಮಾತನಾಡಿದ್ದರು. ಈ ವೇಳೆ, ಯುವತಿ ತನ್ನ ಮೈ ಮೇಲಿನ ಬಟ್ಟೆ ಬಿಚ್ಚಿದ್ದಾಳೆ. ಇದರಿಂದ ಪ್ರಚೋದನೆಗೊಂಡ ಕ್ರಿಕೆಟಿಗ ಕೂಡ ತನ್ನ ಬಟ್ಟೆಯನ್ನ ಕಳಚಿ ನಗ್ನಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯುವ ಕ್ರಿಕೆಟಿಗ ನಗ್ನವಾಗಿರುವ ವಿಡಿಯೋವನ್ನ ಸ್ಕ್ರಿನ್ ಶಾಟ್ ಮೂಲಕ ವಿಡಿಯೋ ಸೆರೆ ಹಿಡಿದು ಕೆಲ ಹೊತ್ತಿನ ಬಳಿಕ ಆರೋಪಿತೆ ಕರೆ ಮಾಡಿದ್ದಾಳೆ. ಮಾನಹಾನಿ ಮಾಡುವುದಾಗಿ ಬೆದರಿಸಿದ ಯುವತಿ, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಗಲಿಬಿಲಿಗೊಂಡ ಆಟಗಾರ ಆನ್ಲೈನ್ ಮೂಲಕ 1500 ರೂಪಾಯಿ ಶೇರ್ ಮಾಡಿದ್ದರು. ಆದಾಗ್ಯೂ ಹೆಚ್ಚಿನ ಹಣ ನೀಡುವಂತೆ ಯುವತಿ ಒತ್ತಾಯಿಸಿದ್ದಳು. ಈ ವಿಚಾರವನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದರು. ಇದಾದ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಾಟ್ಸ್ಆ್ಯಪ್ನಲ್ಲಿ ಕರೆ ಮಾಡಿದ ಯುವತಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನ (ಎಐ) ಆಧರಿಸಿ ಕರೆ ಮಾಡಿದ್ದಾರೆ? ಅಥವಾ ನಿಜವಾಗಿಯೂ ಯುವತಿಯೇ ಕರೆ ಮಾಡಿದ್ದರಾ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಅಪರಿಚಿತರಿಂದ ವಾಟ್ಸ್ಆ್ಯಪ್ ಸೇರಿದಂತೆ ಇನ್ನಿತರ ಆ್ಯಪ್ ಮೂಲಕ ವಿಡಿಯೋ ಕರೆ ಬಂದರೆ ಸ್ವೀಕರಿಸಬೇಡಿ. ಡೇಟಿಂಗ್ ಆ್ಯಪ್ಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದು ಹಾಗೂ ಅಪರಿಚಿತರ ಮಾತಿಗೆ ಒಳಗಾಗಿ ಪ್ರಚೋದನೆ ಒಳಗಾಗುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ನಾಗರಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.