newsics.com/ನ್ಯೂಸಿಕ್ಸ್
ವರ್ಷಗಳ ಕಾಲ ಭಾರತೀಯ ಇಂಜಿನಿಯರ್‌ಗಳು ಮತ್ತು ಸಾಫ್ಟ್‌ವೇರ್ ಡೆವಲಪರ್‌ಗಳು, ಅಮೆರಿಕದ ಅತಿದೊಡ್ಡ ಟೆಕ್ ಕಂಪನಿಗಳಿಗೆ ಭದ್ರಬುನಾದಿ ಹಾಕುವಲ್ಲಿ ಸಹಾಯ ಮಾಡಿದ್ದರು. ಅವರು ಕೋಡ್ ಬರೆದರು, ತಂಡಗಳನ್ನು ಮುನ್ನಡೆಸಿದರು, ಮನೆಗಳನ್ನು ಖರೀದಿಸಿದರು, ಕುಟುಂಬಗಳನ್ನು ಬೆಳೆಸಿದರು ಮತ್ತು ವಿದೇಶಗಳಲ್ಲಿ ಸ್ಥಿರ ಜೀವನದ ಕನಸು ಕಂಡರು.
ಆದರೆ “ದೋಣಿ ದಾಟಿದ ಮೇಲೆ ಅಂಬಿಗನಿಗೇನು ಕೆಲಸ?” ಎಂಬ ಗಾದೆ ಮಾತಿನಂತೆ, ಅಮೆರಿಕ ಈಗ ಭಾರತೀಯರನ್ನು ಬಳಸಿ ಬಿಸಾಡುತ್ತಿದೆ. ಭಾರೀ ಪ್ರಮಾಣದ ಲೇಆಫ್‌ಗಳು ಭಾರತೀಯರ ಅಮೆರಿಕ ಕನಸನ್ನು ಛಿದ್ರಗೊಳಿಸುತ್ತಿದೆ.
ಅಮೆರಿಕ ಕನಸಿನಿಂದ ವಿಮುಖರಾಗುತ್ತಿರುವ ಭಾರತೀಯರು ಒಂದೆಡೆಯಾದರೆ, ಅವರನ್ನು ಹೊರಹಾಕುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಹುನ್ನಾರಗಳು ಒಂದೆಡೆ. ಈಗ ಟ್ರಂಪ್ ಆಡಳಿತದ ಈ ಕುತಂತ್ರಗಳಿಗೆ ಅಮೆರಿಕದ ದೈತ್ಯ ಟೆಕ್ ಕಂಪನಿಗಳೂ ಸಾಥ್ ನೀಡುತ್ತಿರುವಂತಿದೆ. ಭಾರೀ ಪ್ರಮಾಣದಲ್ಲಿ ಲೇಆಫ್‌ಗಳಿಗೆ ಕೈಹಾಕಿರುವ ಯುಎಸ್ ಟೆಕ್ ಕಂಪನಿಗಳು, ಸುಂದರ ಭವಿಷ್ಯದ ಕನಸು ಹೊತು ಅಮೆರಿಕಕ್ಕೆ ಬಂದಿಳಿದಿದ್ದ ಭಾರತೀಯರನ್ನು ಮತ್ತೆ ತಾಯ್ನಾಡಿನತ್ತ ಮುಖ ಮಾಡುವಂತೆ ಒತ್ತಾಯಿಸುತ್ತಿವೆ. H-1B ವೀಸಾ ಪಡೆಯುವುದೇ ಒಂದು ಸುಯೋಗ ಎಂದುಕೊಂಡಿದ್ದ ಸಾವಿರಾರು ಭಾರತೀಯರಿಗೆ, ಈಗ ಅದೇ ಒಂದು ಶಾಪವಾಗಿ ಕಾಡುತ್ತಿದೆ.
ಅಮೆರಿಕದ ಟೆಕ್ ಕಂಪನಿಗಳ ಲೇಆಫ್ ಪ್ರಕ್ರಿಯೆ ಅನಿವಾಸಿ ಭಾರತೀಯರಲ್ಲಿ ಆತಂಕಗಳನ್ನು ಹುಟ್ಟುಹಾಕಿದೆ. ಭಾರತೀಯ ವೃತ್ತಿಪರರು ಈಗ ಉದ್ಯೋಗ ಕಳೆದುಕೊಳ್ಳುವ ಮತ್ತು ಅಮೆರಿಕದಲ್ಲಿ ಉಳಿಯುವ ಹಕ್ಕನ್ನು ಕಳೆದುಕೊಳ್ಳುವ ಭಯದಲ್ಲಿ ದಿನದೂಡುತ್ತಿದ್ದಾರೆ. ಸಿಲಿಕಾನ್ ವ್ಯಾಲಿಯ ಅನೇಕ ಟೆಕ್ ಕಂಪನಿಗಳು ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಕೈಹಾಕಿವೆ. ಈ ಪ್ರಕ್ರಿಯೆಯಲ್ಲಿ ಕೆಲಸ ಕಳೆದುಕೊಳ್ಳುವ H-1B ವೀಸಾ ಹೊಂದಿರುವ ಭಾರತೀಯರು, ಮುಂದಿನ 60 ದಿನಗಳಲ್ಲಿ ಬೇರೊಂದು ಉದ್ಯೋಗ ಹುಡುಕಿಕೊಳ್ಳದಿದದ್ದರೆ ಅಮೆರಿಕ ಬಿಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಆತಂಕ ಹೆಚ್ಚಿಸಿದ ಮೆಟಾ ಲೇಆಫ್:
ನಿನ್ನೆ (ಮೇ 20-ಬುಧವಾರ) ಮೆಟಾ 8,000 ಉದ್ಯೋಗ ಕಡಿತದ ಆದೇಶ ಹೊರಡಿಸಿದೆ. ಏಕೆಂದರೆ ಅದು ತನ್ನ ಸಂಪನ್ಮೂಲಗಳನ್ನು ಕೃತಕ ಬುದ್ಧಿಮತ್ತೆ (AI)ಯ ಕಡೆಗೆ ತಿರುಗಿಸುತ್ತಿದೆ. ಅಮೆಜಾನ್ ಕೂಡ ಹಲವು ಸುತ್ತಿನ ಉದ್ಯೋಗ ಕಡಿತಗಳನ್ನು ಮಾಡಿದೆ. ಟೆಕ್ ಉದ್ಯಮವು AI ತಂತ್ರಜ್ಷಾನವನ್ನು ಅಳವಡಿಸಿಕೊಂಡಷ್ಟೂ, ಕಂಪನಿಗಳು ತಮ್ಮ ಮಾನವ ಸಂಪನ್ಮೂಲವನ್ನು ಕಡಿಮೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಸಿಲಿಕಾನ್ ವ್ಯಾಲಿಯನ್ನು ಗಟ್ಟಿಗೊಳಿಸಿದ ಭಾರತೀಯ ಉದ್ಯೋಗಿಗಳ ಭವಿಷ್ಯವನ್ನು ಅಂಧಕಾರದಲ್ಲಿ ಮುಳುಗಿಸಿದೆ.
ಬಹುತೇಕ ಎಲ್ಲಾ ಕಂಪನಿಗಳು AI ತಂತ್ರಜ್ಞಾನದ ಮೊರೆ ಹೋಗಿರುವುದರಿಂದ, ಅಮೆರಿಕದಲ್ಲಿ ಕೆಲಸ ಹುಡುಕುವುದು ಕಷ್ಟಸಾಧ್ಯ.
ಅಮೆರಿಕದಲ್ಲಿ ಹೆಚ್ಚಿನ ಭಾರತೀಯ ತಾಂತ್ರಿಕ ವೃತ್ತಿಪರರು H-1B ವೀಸಾಗಳಲ್ಲಿ ಕೆಲಸ ಮಾಡುತ್ತಾರೆ. ಇವುಗಳು ನೇರವಾಗಿ ಅವರ
ಉದ್ಯೋಗದಾತರಿಗೆ ಸಂಬಂಧಿಸಿವೆ. ಅಮೆರಿಕದಲ್ಲಿ ಭಾರತೀಯರು ಕೆಲಸ ಕಳೆದುಕೊಂಡ ನಂತರ,ಹೊಸ ಉದ್ಯೋಗ ಹುಡುಕಲು ಅವರಿಗೆ ಕಡಿಮೆ ಸಮಯ ಇರುತ್ತದೆ. ಯುಎಸ್ ವಲಸೆ ನಿಯಮಗಳ ಅಡಿಯಲ್ಲಿ, ಅವರು ತಮ್ಮ ವೀಸಾವನ್ನು ಪ್ರಾಯೋಜಿಸಲು ಸಿದ್ಧರಿರುವ ಇನ್ನೊಬ್ಬ ಉದ್ಯೋಗದಾತರನ್ನು ಹುಡುಕಲು, ಕೇವಲ 60 ದಿನಗಳ ಸಮಯಾವಕಾಶ ಮಾತ್ರ ಇರುತ್ತದೆ. ಒಂದು ವೇಳೆ ಅವರು ಹೊಸ ಉದ್ಯೋಗ ಹಡುಕಲು ವಿಫಲವಾದರೆ, ಅಮೆರಿಕ ತೊರೆಯುವುದು ಅನಿವಾರ್ಯವಾಗುತ್ತದೆ.
ಅನಿವಾಸಿ ಭಾರತೀಯರ ಪಾಲಿಗೆ ಲೇಆಫ್ ಪ್ರಕ್ರಿಯೆ, ವೃತ್ತಿಪರ ಹಿನ್ನಡೆಗಿಂತ ಹೆಚ್ಚಿನದಾಗಿದೆ. ಇದು ವಲಸೆ ದಾಖಲೆಗಳು, ಮಕ್ಕಳ ಶಾಲಾ ಪ್ರವೇಶಗಳು, ಆರೋಗ್ಯ ರಕ್ಷಣೆ ಮತ್ತು ಕುಟುಂಬ ನಿರ್ಧಾರಗಳನ್ನು ಒಳಗೊಂಡ ಸಮಯದ ವಿರುದ್ಧದ ಓಟವಾಗಿದೆ. ಯುಎಸ್‌ನಲ್ಲಿ ಕೆಲಸ ಮಾಡುವ ಅನೇಕ ಭಾರತೀಯರು, ವರ್ಷಗಳಿಂಧ ಗ್ರೀನ್ ಕಾರ್ಡ್‌ಗಳಿಗಾಗಿಕಾಯುತ್ತಿದ್ದಾರೆ. ಕೆಲವರಿಗೆ ಅಮೆರಿಕದಲ್ಲೇ ಜನಿಸಿದ ಮಕ್ಕಳಿದ್ದಾರೆ. ಇತರರು ದೀರ್ಘಕಾಲ ವಾಸಿಸುವ ಇರಾದೆಯೊಂದಿಗೆ ಅಲ್ಲಿ ಮನೆಗಳನ್ನು ಖರೀದಿಸಿದ್ದಾರೆ. ಕೆಲಸ ಕಳೆದುಕೊಳ್ಳುವುದು ಆ ಎಲ್ಲಾ ಯೋಜನೆಗಳನ್ನು ಬಹುತೇಕವಾಗಿ ಅನಿಶ್ಚಿತತೆಗೆ ತಳ್ಳುತ್ತದೆ.
60-ದಿನಗಳ H-1B ವೀಸಾ ನಿಯಮ:
ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು (USCIS) ನಿಗದಿಪಡಿಸಿದ ನಿಯಮಗಳ ಅಡಿಯಲ್ಲಿ, ವಜಾಗೊಂಡ H-1B ವೀಸಾ ಕಾರ್ಮಿಕರಿಗೆ, ಸಾಮಾನ್ಯವಾಗಿ 60 ದಿನಗಳ ಗ್ರೇಸ್ ಅವಧಿಯನ್ನು ನೀಡಲಾಗುತ್ತದೆ. ಅಲ್ಲದೇ ವಿದೇಶೀ ಕಾರ್ಮಿಕರ I-94 ಸ್ಥಿತಿ ಅವಧಿ ಮುಗಿಯುವವರೆಗೆ ಅವರಿಗೆ ಅಮೆರಿಕದಲ್ಲಿ ಇರಲು ಅವಕಾಶ ನೀಡಲಾಗುತ್ತದೆ. ಈ ಎರಡರ ಪೈಕಿ ಯಾವುದು ಮೊದಲು ಬರುತ್ತದೆಯೋ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ ಅವರು ತಮ್ಮ ವೀಸಾವನ್ನು ಪ್ರಾಯೋಜಿಸಲು ಸಿದ್ಧರಿರುವ ಇನ್ನೊಬ್ಬ ಉದ್ಯೋಗದಾತರನ್ನು ಹುಡುಕಬಹುದು. ಬೇರೆ ವೀಸಾ ವರ್ಗಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಯುಎಸ್ ತೊರೆಯುವ ನಿರ್ಧಾರ ಕೈಗೊಳ್ಳಬಹುದು.
ಮುಖ್ಯವಾಗಿ, 60-ದಿನಗಳ ಅವಧಿಯು ಸಾಮಾನ್ಯವಾಗಿ ಉದ್ಯೋಗಿಯ ಕೊನೆಯ ಕೆಲಸದ ದಿನದಿಂದ ಪ್ರಾರಂಭವಾಗುತ್ತದೆ. ಹಠಾತ್ ವಜಾಗಳ ನಂತರ ಕೌಶಲ್ಯಪೂರ್ಣ ವಿದೇಶಿ ಕಾರ್ಮಿಕರಿಗೆ ಸ್ವಲ್ಪ ವಿಶ್ರಾಂತಿ ನೀಡಲು ಈ ನಿಯಮವನ್ನು ಪರಿಚಯಿಸಲಾಗಿದೆ. ಆದರೆ ವಾಸ್ತವದಲ್ಲಿ ಟೆಕ್ ಕಂಪನಿಗಳು ನೇಮಕಾತಿ ಪ್ರಕ್ರಿಯೆಯನ್ನು ನಿಧಾನಗೊಳಿಸಿರುವಾಗ, ಎರಡು ತಿಂಗಳ ಅವಧಿ ಬಹಳ ಚಿಕ್ಕದ್ದಾಗಿದೆ. ಏಕೆಂದರೆ ವಿದೇಶಿ ಕಾರ್ಮಿಕರು ಹೊಸ ಪ್ರಾಯೋಜಕರನ್ನು ಹುಡುಕುವುದು ಸಾಮಾನ್ಯವಾಗಿ ಸುಲಭವಲ್ಲ. ಉದ್ಯೋಗ ಸಂದರ್ಶನಗಳು ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತವೆ. ವೀಸಾ ವರ್ಗಾವಣೆ ಪ್ರಕಿಯೆಗೂ ಸಮಯ ಬೇಕಾಗುತ್ತದೆ.
ಈ ಕಾರಣಕ್ಕೆ ಅನೇಕ ವಲಸೆ ವಕೀಲರು ಸಾಂಪ್ರದಾಯಿಕವಾಗಿ ಕೆಲಸದಿಂದ ತೆಗೆದುಹಾಕಲ್ಪಟ್ಟ ಕಾರ್ಮಿಕರಿಗೆ, ಫಾರ್ಮ್ I-539 ಸಲ್ಲಿಸುವ ಮೂಲಕ ತಾತ್ಕಾಲಿಕವಾಗಿ B-1 ಅಥವಾ B-2 ಸಂದರ್ಶಕ ವೀಸಾಕ್ಕೆ ಬದಲಾಯಿಸಲು ಸಲಹೆ ನೀಡುತ್ತಾರೆ. ಆ ಆಯ್ಕೆಯು ಇನ್ನೂ ಕಾನೂನುಬದ್ಧವಾಗಿ ಲಭ್ಯವಿದೆ. ಆದಾಗ್ಯೂ, ಇತ್ತೀಚಿನ ವರದಿಗಳ ಪ್ರಕಾರ, ಯುಎಸ್ ಅಧಿಕಾರಿಗಳು ಈಗ ಅಂತಹ ಅರ್ಜಿಗಳನ್ನು ಮೊದಲಿಗಿಂತ ಹೆಚ್ಚು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಹೆಚ್ಚುವರಿ ದಾಖಲೆಗಳಿಗಾಗಿ ಹೆಚ್ಚುತ್ತಿರುವ ವಿನಂತಿಗಳು ಮತ್ತು ಸ್ಥಾನಮಾನ ಬದಲಾವಣೆಯ ಫೈಲಿಂಗ್‌ಗಳ ಸುತ್ತಲೂ ಕಠಿಣವಾದ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.
ಒಂದು ಮಾಹಿತಿ ಪ್ರಕಾರ 2026ರ ಅವಧಿಯಲ್ಲಿ ಸಿಲಿಕಾನ್ ವ್ಯಾಲಿಯ ವಿವಿಧ ಟೆಕ್ ಕಂಪನಿಗಳು, ಸುಮಾರು 110,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಇದರಲ್ಲಿ ಬಹುತೇಕರು ಭಾರತೀಯರಾಗಿದ್ದಾರೆ. ಏಕೆಂದರೆ ಭಾರತೀಯರು ಈಗಲೂ H-1B ವೀಸಾ ಕಾರ್ಯಕ್ರಮದ ಅತಿದೊಡ್ಡ ಫಲಾನುಭವಿಗಳಾಗಿ ಉಳಿದಿದ್ದಾರೆ. 2025ರ ಹಣಕಾಸು ವರ್ಷದ ಯುಎಸ್ ಸರ್ಕಾರದ ದತ್ತಾಂಶವು, ಅನುಮೋದಿತ H-1B ಅರ್ಜಿಗಳಲ್ಲಿ ಹೆಚ್ಚಿನ ಭಾಗವನ್ನು ಭಾರತೀಯರು ಹೊಂದಿದ್ದಾರೆ ಎಂಬುದನ್ನು ತೋರಿಸಿದೆ. ಆದರೆ ಈಗ ಈ ವ್ಯವಸ್ಥೆಯ ಮೇಲಿನ ಭಾರತೀಯರ ಅವಲಂಬನೆಯು ದುರ್ಬಲವಾಗುತ್ತಿದೆ.
ದಶಕಗಳಿಂದ ವೃತ್ತಿ ಬೆಳವಣಿಗೆ, ಹೆಚ್ಚಿನ ಸಂಬಳ ಮತ್ತು ಜಾಗತಿಕ ಮಾನ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯರು ಅಮೆರಿಕಕ್ಕೆ ವಲಸೆ ಹೋಗಿದ್ದಾರೆ. ಆದರೆ ಈಗ ಪರಿಸ್ಥಿತಿಗಳು ಬದಲಾಗುತ್ತಿದ್ದು, ಕಠಿಣ ವೀಸಾ ನಿಯಮ, AI ತಂತ್ರಜ್ಞಾನದ ಬೆಳವಣಿಗೆ, ಟೆಕ್ ಕಂಪನಿಗಳ ಉದ್ಯೋಗ ಕಡಿತ, ಅಮೆರಿಕದಲ್ಲಿ ಸಾವಿರಾರು ಭಾರತೀಯರ ಬದುಕನ್ನು ಅನಿಶ್ಚಿತತೆಗೆ ದೂಡಿದೆ. ಇತ್ತೀಚಿನ ಬ್ಲೈಂಡ್ ಸಮೀಕ್ಷೆಯ ಪ್ರಕಾರ, ಅಮರಿಕದಲ್ಲಿರುವ ಸುಮಾರು ಅರ್ಧದಷ್ಟು ಭಾರತೀಯ ವೃತ್ತಿಪರರು, ತಮ್ಮ ಉದ್ಯೋಗ ಕಳೆದುಕೊಂಡರೆ ಭಾರತಕ್ಕೆ ಮರಳುವುದನ್ನು ಪರಿಗಣಿಸುತ್ತಾರೆ. ಇನ್ನೂ ಕೆಲವರು ಯುರೋಪ್ ದೇಶಗಳನ್ನು ಪರ್ಯಾಯ ಆಯ್ಕೆಯಾಗಿ ನೋಡುತ್ತಿದ್ದಾರೆ.