newsics.com/ನ್ಯೂಸಿಕ್ಸ್
ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ರಸಗೊಬ್ಬರ ತಯಾರಿಕಾ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಪೊಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳ ದರ ಗಣನೀಯವಾಗಿ ಹೆಚ್ಚಾಗಿದೆ.
ಯೂರಿಯಾ ಮತ್ತು ಡಿಎಪಿ ದರದಲ್ಲಿ ಭಾರಿ ಏರಿಕೆಯಾಗಿದ್ದರೂ ಕೇಂದ್ರ ಸರ್ಕಾರ ಭಾರಿ ಪ್ರಮಾಣದ ಸಬ್ಸಿಡಿ ನೀಡುವ ಮೂಲಕ ದರವನ್ನು ನಿಯಂತ್ರಣದಲ್ಲಿಟ್ಟಿದೆ. ಆದರೆ, ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರದ ನಿಯಂತ್ರಣ ಇರದೇ ಇರುವುದರಿಂದ ಇವುಗಳ ದರ ತಿಂಗಳಲ್ಲಿಯೇ ಎರಡು ಬಾರಿ ಏರಿಕೆಯಾಗಿದೆ.
ಮೇ ತಿಂಗಳ ಆರಂಭದಲ್ಲಿ ಪ್ರತಿ 50 ಕೆ.ಜಿ. ಚೀಲಕ್ಕೆ ₹1,400 ಇದ್ದ ಕಾಂಪ್ಲೆಕ್ಸ್ ಮತ್ತು ಪೋಟ್ಯಾಷ್ ಬೆಲೆ, ಈಗಾಗಲೇ ₹1,700ಕ್ಕೆ ತಲುಪಿದೆ. ಇನ್ನು ಮಾರುಕಟ್ಟೆಗೆ ಬರುತ್ತಿರುವ ಹೊಸ ದಾಸ್ತಾನುಗಳ (ಸ್ಟಾಕ್) ಬೆಲೆ ಬರೋಬ್ಬರಿ ₹2,200ಕ್ಕೆ ಜಿಗಿದಿದೆ. ಮುಂಬರುವ ದಿನಗಳಲ್ಲಿ ಈ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಯೂರಿಯಾ ಮತ್ತು ಇತರೆ ರಸಗೊಬ್ಬರ ಕೊಳ್ಳಲು ಈಗ ಎಫ್ಐಡಿ (ರೈತರ ಗುರುತಿನ ಸಂಖ್ಯೆ) ಕಡ್ಡಾಯ. ಎಫ್ಐಡಿ ಹೊಂದಿದ ರೈತರಿಗೆ, ‘ಕೆ ಕಿಸಾನ್’ ಆ್ಯಪ್ ಮೂಲಕ ನೋಂದಣಿ ಮಾಡಿ, ಎಕರೆಗೆ ಕೇವಲ 1 ಚೀಲ ಮಾತ್ರ ನೀಡಲಾಗುತ್ತದೆ. ಇದಕ್ಕಿಂತ ಹೆಚ್ಚಿಗೆ ಖರೀದಿ ಮಾಡಲು ಸಾಧ್ಯವಿಲ್ಲ. ಎಫ್ಐಡಿಯಲ್ಲಿ ನೋಂದಣಿ ಮಾಡಿಯೇ ಕೊಡಬೇಕಾಗಿದ್ದರಿಂದ ಎಲ್ಲಿಯೇ ಖರೀದಿ ಮಾಡಿದರೂ ಅದು ಎಕರೆಗೆ ಒಂದು ಚೀಲ ಖರೀದಿಯಾಗುತ್ತಿದ್ದಂತೆ ಲಾಕ್ ಆಗುತ್ತದೆ. ಇನ್ನು, 20 ಎಕರೆಗಿಂತಲೂ ಹೆಚ್ಚು ಭೂಮಿ ಇದ್ದ ರೈತರು, ಬೆಳೆ ದೃಢೀಕರಣ ಪ್ರಮಾಣ ಪತ್ರ ನೀಡಿ, ಹೆಚ್ಚುವರಿಯಾಗಿ ಯೂರಿಯಾ ರಸಗೊಬ್ಬರ ಪಡೆಯಬಹುದಾಗಿದೆ.
ಮುಕ್ತ ಮಾರುಕಟ್ಟೆಯ ಏರಿಳಿತಗಳಿಂದಾಗಿ ಸರ್ಕಾರ ಎಷ್ಟು ದಿನಗಳ ಕಾಲ ಈ ಸಬ್ಸಿಡಿ ಹೊರೆಯನ್ನು ಭರಿಸಿ ದರವನ್ನು ಕಾಯ್ದುಕೊಳ್ಳಲು ಸಾಧ್ಯ ಎಂಬ ಪ್ರಶ್ನೆಯೂ ಎದುರಾಗಿದೆ.