newsics.com/ನ್ಯೂಸಿಕ್ಸ್
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಜೈಲಾಧಿಕಾರಿಗಳಿಂದ ಕೊಂಚ ನಿರಾಳತೆ ಸಿಕ್ಕಿದೆ.
ಜೈಲಿನ ನಿಯಮಾವಳಿಗಳ ಪ್ರಕಾರ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರನ್ನು ಮುಖಾಮುಖಿಯಾಗಿ ಭೇಟಿಯಾಗಲು ಜೈಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಜೈಲು ಸೇರಿರುವ ನಟ ದರ್ಶನ್, ಕಾರಾಗೃಹದ ನಿಯಮಾವಳಿಗಳ ಅನ್ವಯ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ಅನುಮತಿ ಕೋರಿ ಜೈಲಾಧಿಕಾರಿಗಳಿಗೆ ಲಿಖಿತ ಪತ್ರವೊಂದನ್ನು ಬರೆದಿದ್ದರು. ಜೈಲಿಗೆ ಬರುವ ಪತ್ನಿ ಮತ್ತು ಮಗನೊಂದಿಗೆ ನಿಯಮಿತವಾಗಿ ಮಾತನಾಡಲು ಅವಕಾಶ ನೀಡಬೇಕು ಎಂದು ಅವರು ಈ ಪತ್ರದ ಮೂಲಕ ವಿನಂತಿಸಿದ್ದರು.
ಜೈಲು ವಾಸದಿಂದಾಗಿ ಎದುರಿಸುತ್ತಿರುವ ಮಾನಸಿಕ ಸ್ಥಿತಿ, ಕುಟುಂಬದ ಜವಾಬ್ದಾರಿಗಳು ಹಾಗೂ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಜಾಮೀನು ಪ್ರಕ್ರಿಯೆಯ ಕಾನೂನು ಹೋರಾಟದ ಕುರಿತು ಪತ್ನಿಯೊಂದಿಗೆ ಸುದೀರ್ಘವಾಗಿ ಚರ್ಚಿಸಬೇಕಿದೆ. ಹೀಗಾಗಿ ಒಳಸಂದರ್ಶನದ ಅಗತ್ಯವಿದೆ,” ಎಂದು ದರ್ಶನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.ಇದಕ್ಕೂ ಮುನ್ನ ದರ್ಶನ್ ಪರ ವಕೀಲರ ತಂಡವೂ ಸಹ ಕುಟುಂಬದವರೊಂದಿಗೆ ಮುಖಾಮುಖಿ ಸಂದರ್ಶನಕ್ಕೆ ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು.
ವಿಶೇಷವೆಂದರೆ, ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲೇ ಈ ವಿಶೇಷ ಭೇಟಿಗೆ ಮನವಿ ಸಲ್ಲಿಕೆಯಾಗಿತ್ತು. ಜೈಲಿನ ಕತ್ತಲ ಕೋಣೆಯಲ್ಲಿ ಕಂಗೆಟ್ಟಿರುವ ನಟನಿಗೆ, ಮದುವೆ ವಾರ್ಷಿಕೋತ್ಸವದ ದಿನದಂದೇ ಹೆಂಡತಿ ಮತ್ತು ಮಗನ ಮುಖಾಮುಖಿ ಭೇಟಿ ಕೊಂಚ ಭಾವನಾತ್ಮಕ ನಿರಾಳತೆ ತಂದಿದೆ ಎಂದು ಹೇಳಲಾಗುತ್ತಿದೆ.
Srividya Raj ನೆಮ್ಮದಿಯಾಗಿರೋದಕ್ಕೆ ದೇವರು ಬಿಡೋದಿಲ್ಲ : ಶ್ರೀವಿದ್ಯಾ ಭಾವುಕ ಪೋಸ್ಟ್