newsics.com/ನ್ಯೂಸಿಕ್ಸ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಮಧ್ಯಾಹ್ನ ದಿಢೀರ್ ಹವಾಮಾನ ಬದಲಾಗಿದ್ದು, ನಗರದಾದ್ಯಂತ ಗುಡುಗು ಸಹಿತ ಭೋರ್ಗರೆದ ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣ ವ್ಯತ್ಯಯಗೊಂಡಿದೆ. ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ಮಳೆ ತಂಪೆರೆದರೂ, ಸಂಚಾರ ದಟ್ಟಣೆ ಮತ್ತು ಜಲಾವೃತ ರಸ್ತೆಗಳು ಸಾರ್ವಜನಿಕರನ್ನು ಹೈರಾಣಾಗಿಸಿವೆ.
ಆಲಿಕಲ್ಲು ಮಳೆ:
ನಗರದ ಮಧ್ಯಭಾಗ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆಯಾದ ವರದಿಯಾಗಿದೆ. ವಿಶೇಷವಾಗಿ ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೋರಮಂಗಲ, ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಕಾರ್ಪೊರೇಷನ್ ಮತ್ತು ಶಿವಜಿನಗರ ಭಾಗಗಳಲ್ಲಿ ವರುಣ ಆರ್ಭಟಿಸಿದ್ದಾನೆ.
ವಾಹನ ಸವಾರರ ಪರದಾಟ:
ಕಚೇರಿ ಹಾಗೂ ಕೆಲಸ ಕಾರ್ಯಗಳಿಗಾಗಿ ಹೊರಬಂದಿದ್ದ ವಾಹನ ಸವಾರರು ದಿಢೀರ್ ಮಳೆಯಿಂದಾಗಿ ರಸ್ತೆ ಮಧ್ಯೆಯೇ ಸಿಲುಕಿಕೊಂಡರು. ಮಳೆಯ ಅಬ್ಬರಕ್ಕೆ ರಸ್ತೆಗಳ ಮೇಲೆ ನೀರು ನುಗ್ಗಿದ್ದರಿಂದ ದ್ವಿಚಕ್ರ ವಾಹನ ಸವಾರರು ಫ್ಲೈ ಓವರ್ ಹಾಗೂ ಮೆಟ್ರೋ ನಿಲ್ದಾಣಗಳ ಕೆಳಗೆ ಆಶ್ರಯ ಪಡೆಯಬೇಕಾಯಿತು.
ಸಂಚಾರ ದಟ್ಟಣೆ
ಭಾರೀ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಡಿಯುದ್ದ ನೀರು ನಿಂತಿದ್ದು, ವಾಹನ ಸಂಚಾರ ಆಮೆಗತಿಯಲ್ಲಿ ಸಾಗುತ್ತಿದೆ. ಮೆಜೆಸ್ಟಿಕ್ ಮತ್ತು ಮಾರ್ಕೆಟ್‌ನಂತಹ ಜನನಿಬಿಡ ಪ್ರದೇಶಗಳಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯುವಂತಾಯಿತು. ಮಳೆಯ ನಡುವೆಯೇ ವಾಹನಗಳನ್ನು ಚಲಾಯಿಸಲು ಸವಾರರು ಹರಸಾಹಸ ಪಡುತ್ತಿದ್ದಾರೆ.
ಮುಂದಿನ ಕೆಲವು ಗಂಟೆಗಳ ಕಾಲ ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ, ವಾಹನ ಸವಾರರು ಜಾಗರೂಕತೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬೀದರ್ ನ ಗುರುನಾನಕ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ಪ್ರಾಣಭಯದಿಂದ ಓಡಿದ ರೋಗಿಗಳು!
ನಾಯಿಗಳ ರಕ್ತದ ದಂಧೆ ಬಯಲು , ಒಂದು ಪ್ಯಾಕೆಟ್‌ಗೆ 25,000 ರೂ. ವರೆಗೆ ಮಾರಾಟ !