newsics.com
ಕೆಲವರಿಗೆ ಎಸಿ ಇದ್ದಲ್ಲಿಂದ ಹೊರಬಂದ ಕೂಡಲೇ ತಲೆನೋವು, ಒಂದು ರೀತಿಯ ಸುಸ್ತಾದಂತೆ ಅನುಭವವಾಗುತ್ತದೆ. ಕೆಲವರಿಗೆ ತಲೆಸುತ್ತು, ಕಣ್ಣಿನಲ್ಲಿ ನೋವು, ಮೂಗು ಬ್ಲಾಕ್ ಆಗುವುದು, ಗಂಟಲು ಒಣಗುವುದು ಮತ್ತು ದೇಹದಲ್ಲಿ ಸ್ವಲ್ಪ ದುರ್ಬಲತೆ ಕೂಡ ಕಾಣಿಸಬಹುದು.
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಎಸಿಯಲ್ಲಿ ಹೆಚ್ಚು ಸಮಯ ಕಳೆದರೆ ದೇಹ ತಣ್ಣಗಿರುವ ತಾಪಮಾನಕ್ಕೆ ಹೊಂದಿಕೊಳ್ಳುತ್ತದೆ. ನಂತರ ಏಕಾಏಕಿ ಹೊರಗಿನ ಬಿಸಿ ಗಾಳಿಗೆ ಬಂದಾಗ ದೇಹಕ್ಕೆ ತಾಪಮಾನ ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ತಲೆನೋವು ಮತ್ತು ದೌರ್ಬಲ್ಯ ಉಂಟಾಗಬಹುದು. ತಣ್ಣನೆಯ ಗಾಳಿಯಲ್ಲಿ ಹೆಚ್ಚು ಸಮಯ ಕಳೆದರೆ ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಷನ್) ಉಂಟಾಗಬಹುದು. ಹಾಗಾದಾಗಲೂ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಎಸಿ ಗಾಳಿ ಸಾಮಾನ್ಯವಾಗಿ ಒಣಗಿದಂತಿರುತ್ತದೆ. ಇದು ಮೂಗು ಮತ್ತು ಗಂಟಲಿನ ಮೇಲೆ ಪರಿಣಾಮ ಬೀರಿ ಅಸಹಜತೆಯನ್ನು ಉಂಟುಮಾಡುತ್ತದೆ. ಜೊತೆಗೆ, ಎಸಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅದರಲ್ಲಿ ಧೂಳು ಅಥವಾ ಅಲರ್ಜಿ ಉಂಟುಮಾಡುವ ಕಣಗಳು ಸಂಗ್ರಹವಾಗುತ್ತವೆ, ಇದು ಸಮಸ್ಯೆಯನ್ನು ಹೆಚ್ಚಿಸಬಹುದು.
ಸಮಸ್ಯೆ ತಡೆಗಟ್ಟಲು ಏನು ಮಾಡಬೇಕು?
ಎಸಿಯ ತಾಪಮಾನವನ್ನು ತುಂಬಾ ಕಡಿಮೆ ಮಾಡಬೇಡಿ, ಸಾಮಾನ್ಯ ಮಟ್ಟದಲ್ಲೇ ಇಡಿ.
ನಿರಂತರವಾಗಿ ಎಸಿಯಲ್ಲಿ ಹೆಚ್ಚು ಸಮಯ ಕಳೆಯಬೇಡಿ.
ಮಧ್ಯೆ ಮಧ್ಯೆ ಹೊರಗಿನ ತಾಜಾ ಗಾಳಿಯನ್ನು ಪಡೆಯಿರಿ.
ದಿನಪೂರ್ತಿ ಸಾಕಷ್ಟು ನೀರು ಕುಡಿಯಿರಿ.
ಹೊರಗೆ ಹೋಗುವ ಮೊದಲು ಎಸಿಯ ತಾಪಮಾನವನ್ನು ನಿಧಾನವಾಗಿ ಹೆಚ್ಚಿಸಿ.
ಸಮಸ್ಯೆ ಪದೇ ಪದೇ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ.