newsics.com
ವೇಗವಾಗಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಒತ್ತಡದ ಜೀವನದಿಂದಾಗಿ ಹೆಚ್ಚಿನ ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅನೇಕರು ಮಲಗಿದ ನಂತರ ಇಡೀ ರಾತ್ರಿ ಅತಿಯಾಗಿ ಯೋಚಿಸುವುದನ್ನು ಮಾಡುತ್ತಾರೆ, ಇದು ನಿದ್ರಾಹೀನತೆಗೆ ಕಾರಣವಾಗಬಹುದು.
ಈ ನಿದ್ರೆಯ ಕೊರತೆಯು ಬೆಳಗ್ಗೆ ಇಡೀ ದಿನ ಆಯಾಸಕ್ಕೂ ಕಾರಣವಾಗಬಹುದು.
ನೀವು ಅತಿಯಾಗಿ ಯೋಚಿಸುವುದರಿಂದ ಮತ್ತು ನಿದ್ರಿಸಲು ಕಷ್ಟಪಡುವುದರಿಂದ ತೊಂದರೆಗೊಳಗಾಗಿದ್ದರೆ, ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ನಿದ್ರಿಸಬಹುದು. ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುವ ಕೆಲವು ಸಲಹೆಗಳನ್ನು ಇಲ್ಲಿ ಹಂಚಿಕೊಳ್ಳುತ್ತೇವೆ.
ಮಲಗಲು ಸಮಯ ನಿಗದಿ: ಅತಿಯಾಗಿ ಯೋಚಿಸುವುದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅತಿಯಾಗಿ ಯೋಚಿಸುವುದರಿಂದ ನಿದ್ರಾಹೀನತೆ ಉಂಟಾಗುತ್ತದೆ ಮತ್ತು ನಿಮ್ಮ ಮನಸ್ಸಿಗೆ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ. ಈ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಮೊದಲು ಮಲಗುವ ಸಮಯವನ್ನು ನಿಗದಿಪಡಿಸಿ ಮತ್ತು ಪ್ರತಿದಿನ ಒಂದೇ ಸಮಯದಲ್ಲಿ ಮಲಗಲು ಪ್ರಯತ್ನಿಸಿ. ನಾಲ್ಕು ದಿನ ಕಷ್ಟವಾಗಬಹುದು ಆದ್ರೆ ಕ್ರಮೇಣ ಇದು ಅಭ್ಯಾಸವಾಗುತ್ತದೆ.
ಸ್ಕ್ರೀನ್ ನೋಡುವುದು ಕಡಿಮೆ ಮಾಡಿ: ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳು ಅಥವಾ ಟೆಲಿವಿಷನ್‌ಗಳನ್ನು ನಿರಂತರವಾಗಿ ನೋಡುವುದು ಕೂಡ ನಿದ್ರಾಹೀನತೆಗೆ ಪ್ರಮುಖ ಕಾರಣವಾಗಬಹುದು. ರಾತ್ರಿ ಒಳ್ಳೆಯ ನಿದ್ರೆ ಬರಬೇಕಾದರೆ ಮಲಗುವ ಮುನ್ನ ಕನಿಷ್ಠ ಒಂದು ಗಂಟೆ ಮೊದಲು ಈ ಸಾಧನಗಳಿಂದ ದೂರವಿರುವುದು ಮುಖ್ಯ. ಸ್ಕ್ರೀನ್‌ಗಳಿಂದ ಹೊರಸೂಸುವ ನೀಲಿ ಬೆಳಕು ಕಣ್ಣುಗಳು ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಕಣ್ಣುಗಳು ಉರಿಯಲು ಆರಂಭಿಸಿದರೆ ನಿದ್ರೆ ಮಾಡೋಕು ಕಷ್ಟವಾಗುತ್ತದೆ.
ಚಹಾ ಮತ್ತು ಕಾಫಿಯನ್ನು ಸಾಧ್ಯವಾದಷ್ಟು ತಪ್ಪಿಸಿ: ಮಲಗುವ ಮುನ್ನ ಚಹಾ ಅಥವಾ ಕಾಫಿ ಕುಡಿಯುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಯಾಕೆಂದರೆ ಚಹಾ, ಕಾಫಿಯು ನಿದ್ರೆಗೆ ಅಡ್ಡಿಯುಂಟು ಮಾಡಬಹುದು. ಅವು ದೀರ್ಘಕಾಲದ ನಿದ್ರಾಹೀನತೆಗೆ ಕಾರಣವಾಗಬಹುದು. ಅವುಗಳಲ್ಲಿರುವ ಕೆಫೀನ್ ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸಬಹುದು.
ಮಲಗುವ ಮುನ್ನ ಯೋಗ ಮತ್ತು ಧ್ಯಾನ ಮಾಡಿ: ಉತ್ತಮ ನಿದ್ರೆ ನಿಮ್ಮದಾಗಬೇಕಾದರೆ ಮಲಗುವ ಮುನ್ನ ಯೋಗ ಮತ್ತು ಧ್ಯಾನದ ಮೊರೆ ಹೋಗಿ. ಯೋಗ ಅಥವಾ ಧ್ಯಾನ ಮಾಡುವುದು ನಿದ್ರೆಗೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಯೋಗವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಪ್ರತಿದಿನ ಕೇವಲ 10 ರಿಂದ 15 ನಿಮಿಷಗಳ ಯೋಗ ಕೂಡ ನಿಮಗೆ ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ.