newsics.com
ಬೀಜಿಂಗ್: ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ಶಾರ್ಟ್ಸ್‌ಗಳಂತಹ ಚಿಕ್ಕ ವಿಡಿಯೋಗಳನ್ನು ನಿರಂತರವಾಗಿ ನೋಡುವುದು ಮೆದುಳಿಗೆ ಹಾನಿಕಾರಕ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಚೀನಾದ ಟಿಯಾಂಜಿನ್ ನಾರ್ಮಲ್ ವಿಶ್ವವಿದ್ಯಾಲಯದ ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟವಾದ ವರದಿಯು ಇನ್‌ಸ್ಟಾಗ್ರಾಂ ರೀಲ್ಸ್‌ಗಳು ನಮ್ಮ ಏಕೀಕೃತ ಗಮನವನ್ನು ಕಡಿಮೆ ಮಾಡುತ್ತವೆ ಎಂದು ಹೇಳಿದೆ.
ನ್ಯೂರೋಇಮೇಜ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನ ವರದಿಯು, ರೀಲ್ಸ್ ವೀಕ್ಷಣೆ ಮಾಡುವವರಿಗೆ ಗಂಭೀರ ಎಚ್ಚರಿಕೆಯನ್ನು ನೀಡಿದೆ.
ಶಾರ್ಟ್-ವಿಡಿಯೋ ಪ್ಲಾಟ್‌ಫಾರ್ಮ್‌ಗಳ ಅತಿಯಾದ ಬಳಕೆಯು ಜನರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ. ವ್ಯಕ್ತಿಗಳನ್ನು ಜೂಜಾಟ ಮತ್ತು ಮಾದಕವಸ್ತುಗಳಂತಹ ವ್ಯಸನಗಳಿಗೂ ತಳ್ಳಬಹುದು ಎಂದು ಅಧ್ಯಯನ ಎಚ್ಚರಿಸಿದೆ.
ಟಿಕ್‌ಟಾಕ್, ಇನ್‌ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಮುಂತಾದ ಶಾರ್ಟ್-ಫಾರ್ಮ್ ವಿಡಿಯೋ ಪ್ಲಾಟ್‌ಫಾರ್ಮ್‌ಗಳಿಗೆ ವ್ಯಸನಿಯಾಗಿರುವ ಜನರು ಆರ್ಥಿಕ ನಷ್ಟಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅಲ್ಲದೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಬ್ರೇನ್ ಇಮೇಜಿಂಗ್ ಅಧ್ಯಯನ ಹೇಳಿದೆ.
ಶಾರ್ಟ್ ವಿಡಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿನ ಅಂತ್ಯವಿಲ್ಲದ ಸ್ಕ್ರೋಲಿಂಗ್ ಮತ್ತು ವೈಯಕ್ತಿಕಗೊಳಿಸಿದ ವಿಷಯವನ್ನು ನಿರಂತರವಾಗಿ ನೋಡುವುದರಿಂದ ತಾತ್ಕಾಲಿಕ ತೃಪ್ತಿ ಮತ್ತು ಮತ್ತೆ ನೋಡುವ ಬಯಕೆ ಹೆಚ್ಚಾಗುತ್ತದೆ. ಹೀಗೆ ಮಾಡುವುದರಿಂದ ಮೆದುಳಿನ ಚಟುವಟಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಸಂಶೋಧನೆ ಎಚ್ಚರಿಸಿದೆ.
ಇದು ಆರ್ಥಿಕ ವಿಷಯ ಸೇರಿದಂತೆ ವ್ಯಕ್ತಿಗಳು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಶಾರ್ಟ್ ವಿಡಿಯೋ ವ್ಯಸನವು ಜಾಗತಿಕ ಸಾರ್ವಜನಿಕ ಆರೋಗ್ಯ ಬೆದರಿಕೆಯಾಗಿದೆ ಎಂದು ಟಿಯಾಂಜಿನ್ ನಾರ್ಮಲ್ ವಿಶ್ವವಿದ್ಯಾಲಯದ ಮನೋವಿಜ್ಞಾನ ಪ್ರಾಧ್ಯಾಪಕ ಮತ್ತು ಅಧ್ಯಯನದ ಪ್ರಮುಖ ಸಂಶೋಧಕ ಕ್ವಿಯಾಂಗ್ ವಾಂಗ್ ಹೇಳಿದ್ದಾರೆ.
Fetus in Fetu 36 ವರ್ಷಗಳ ಕಾಲ ಗರ್ಭಿಣಿಯಾಗಿದ್ದ ಈ ವ್ಯಕ್ತಿಗೆ ಅವಳಿ ಮಕ್ಕಳು!; ಇದೆಲ್ಲ ಹೇಗಾಯ್ತು?
Weird Village ಈ ಗ್ರಾಮಕ್ಕೆ ಪುರುಷರಿಗೆ ನೋ ಎಂಟ್ರಿ; ನಿಷೇಧದ ಹಿಂದಿನ ಕಾರಣವೇನು?