newsics.com
ಅದಿಲಾಬಾದ್: ಒಂದು ಮರವನ್ನೂ ಕಡಿಯದೇ ಸಂಪೂರ್ಣವಾಗಿ ಮರದಿಂದಲೇ ಒಂದು ವಿಶೇಷವಾದ ದೇಗುಲ ನಿರ್ಮಾಣ ಮಾಡಿರುವ ಘಟನೆ ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಸಿರಿಕೊಂಡ ಮಂಡಲದ ವಾಯುಪೇಟ ಗ್ರಾಮದಲ್ಲಿ ನಡೆದಿದೆ.
ಇಲ್ಲಿ ತಲೆತಲಾಂತರಗಳಿಂದ ಅರಣ್ಯವಾಸಿ ಸಮುದಾಯದ ಜನರು ಮಹಾಂಕಾಳಿಯನ್ನು ಪುಟ್ಟ ಗುಡಿಸಿಲಿನಲ್ಲಿ ಪೂಜಿಸುತ್ತಿದ್ದರು. ಆದರೆ, ಗ್ರಾಮದ ಕಿನಕ ಶಂಭು ಎಂಬವರು ಇತ್ತೀಚೆಗೆ ನೇಪಾಳಕ್ಕೆ ಭೇಟಿ ನೀಡಿದ್ದರು. ಅಲ್ಲಿ ಇದೇ ರೀತಿಯ ಮರದಲ್ಲಿ ವಿನ್ಯಾಸವಾಗಿರುವ ದೇಗುಲ ನೋಡಿ ಆಕರ್ಷಿತರಾಗಿ, ಅದೇ ರೀತಿಯ ಗುಡಿಯನ್ನು ತಮ್ಮ ಗ್ರಾಮದಲ್ಲೂ ನಿರ್ಮಾಣ ಮಾಡುವ ಇಚ್ಛೆ ಹೊಂದಿದ್ದರು. ಇದೀಗ ಅವರ ಕನಸು ನನಸಾಗಿದೆ.
2023ರಲ್ಲಿ ಈ ದೇಗುಲ ನಿರ್ಮಾಣ ಕಾರ್ಯ ಶುರುವಾಯಿತು. ಮಳೆಯಿಂದ ಉರುಳಿ ಬಿದ್ದ ಮರಗಳು ಮತ್ತು ಕಾಡ್ಗಿಚ್ಚಿನಿಂದ ಹಾನಿಗೊಂಡ ಮರಗಳನ್ನು ಇದಕ್ಕೆ ಬಳಕೆ ಮಾಡಲಾಗಿದೆ. ಹಾಗಾಗಿ, ಇದಕ್ಕಾಗಿ ಒಂದು ಮರವನ್ನೂ ಕಡಿಯಲಾಗಿಲ್ಲ ಎಂದು ಶಂಭು ತಿಳಿಸಿದರು.
ಹೀಗಿದೆ ದೇಗುಲದ ರಚನೆ:
- ಮರದ ಕಂಬಗಳು
- ಮರದಿಂದಲೇ ಮಾಡಿದ ಗೋಪುರ, ಗರ್ಭಗುಡಿ, ಮುಖ್ಯ ದ್ವಾರ ಮತ್ತು ಗೋಡೆಗಳು
- ಪ್ರತಿಯೊಂದು ಕಂಬ ಮತ್ತು ತೊಲೆಯ ಮೇಲೆ ಬುಡಕಟ್ಟು ಪ್ರಾಣಿಗಳು, ಪಕ್ಷಿಗಳು ಮತ್ತು ದೇವತೆಗಳ ಕೆತ್ತನೆಗಳು.
ದೇಗುಲದ ಮತ್ತೊಂದು ವಿಶೇಷತೆ ಎಂದರೆ, ಇದರ ನಿರ್ಮಾಣಕ್ಕೆ ಯಾವುದೇ ಇಂಜಿನಿಯರ್ ಅಥವಾ ಆಧುನಿಕ ಯಂತ್ರಗಳನ್ನೂ ಬಳಕೆ ಮಾಡಿಲ್ಲ. ಸ್ಥಳೀಯ ಬುಡಕಟ್ಟು ಬಡಗಿಗಳು ತಮ್ಮ ಸಂಪ್ರದಾಯಿಕ ತಂತ್ರಜ್ಞಾನ ಮತ್ತು ಸಾಧನಗಳಿಂದಲೇ ಈ ದೇಗುಲಕ್ಕೆ ಜೀವ ತುಂಬಿದ್ದಾರೆ. ಪರಿಸರ ಜಾಗೃತಿ ಸಾರುವ ಈ ದೇಗುಲ ನಿರ್ಮಾಣ ಕೇವಲ ಗ್ರಾಮದ ಜನರ ಆಧ್ಯಾತ್ಮಿಕ ಶಕ್ತಿಯನ್ನು ಮಾತ್ರವೇ ಬಿಂಬಿಸುವುದಿಲ್ಲ. ಬದಲಾಗಿ, ಪ್ರಕೃತಿಯ ಬಗೆಗಿನ ಗೌರವ, ಸುಸ್ಥಿರ ವಾಸ್ತುಶಿಲ್ಪಕ್ಕೊಂದು ಸೂಕ್ತ ಉದಾಹರಣೆಯಾಗಿದೆ.
Fake Currency Notes ದಾಂಡೇಲಿಯಲ್ಲಿ ₹12 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ!