newsics.com
ಬೆಂಗಳೂರು : ರಾಜ್ಯದಲ್ಲಿ ಬಿಸಿಗಾಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಲಹೆಗಳನ್ನು ಪ್ರಕಟಿಸಿದೆ.
ಆರೋಗ್ಯ ಇಲಾಖೆಯು ಆರೋಗ್ಯ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ಜ್ವರ, ತಲೆನೋವು, ಊತ, ಸ್ನಾಯು ಸೆಳೆತ, ಪ್ರಜ್ಞೆ ತಪ್ಪುವಿಕೆ, ಸುಸ್ತು, ಪಾರ್ಶ್ವವಾಯು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ತಾಪಮಾನ ಹೆಚ್ಚಳದಿಂದ ಹೃದ್ರೋಗ, ಉಸಿರಾಟ, ಮೂತ್ರಪಿಂಡದ ಸಮಸ್ಯೆಯೂ ಅಧಿಕವಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ನವಜಾತ ಶಿಶುಗಳು, ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಹೃದ್ರೋಗ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಇರುವವರು.
ಆರೋಗ್ಯ ಇಲಾಖೆಯ ಪ್ರಮುಖ ಸಲಹೆಗಳು
- ಬಾಯಾರಿಕೆ ನಿರ್ಜಲೀಕರಣದ ಲಕ್ಷಣ. ಬಾಯಾರಿಕೆ ಇಲ್ಲದಿದ್ದರೂ ಹೆಚ್ಚು ನೀರನ್ನು ಆಗಾಗ ಕುಡಿಯಬೇಕು. ಪ್ರಯಾಣದ ಅವಧಿಯಲ್ಲಿ ಕುಡಿಯಲು ನೀರನ್ನು ಜತೆಗೆ ತೆಗೆದುಕೊಂಡು ಹೋಗಬೇಕು.
- ಓಆರ್‌ಎಸ್ ಹಾಗೂ ನಿಂಬೆ ನೀರು, ಮಜ್ಜಿಗೆಯಂತಹ ಪಾನೀಯ ಸೇವಿಸಬೇಕು. ಹೆಚ್ಚು ನೀರಿನ ಅಂಶವಿರುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು.
- ಹಗುರ ಹಾಗೂ ಸಡಿಲವಾದ ಹತ್ತಿ ಬಟ್ಟೆಯನ್ನು ಧರಿಸಬೇಕು. ಬಿಸಿಲಿನಲ್ಲಿ ಹೊರಗಡೆ ಹೋಗುವುದು ಅನಿವಾರ್ಯವಾದರೆ, ಟೋಪಿ, ಕೊಡೆಯಿಂದ ರಕ್ಷಣೆ ಪಡೆಯಬೇಕು.
- ಹೊರಾಂಗಣ ಚಟುವಟಿಕೆಗಳನ್ನು ಸಾಧ್ಯವಾದಷ್ಟು ಬೆಳಿಗ್ಗೆ ಅಥವಾ ಸಂಜೆ ಅವಧಿಗೆ ಸೀಮಿತಗೊಳಿಸಬೇಕು.
- ಸಭೆ, ಸಮಾರಂಭಗಳಿದ್ದಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ಶಾಮಿಯಾನ, ಪೆಂಡಾಲ್ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಯ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು
ಏನು ಮಾಡಬಾರದು?
- ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೊರ ಹೋಗುವುದನ್ನು ತಪ್ಪಿಸಬೇಕು. ಮಧ್ಯಾಹ್ನದ ಅವಧಿಯಲ್ಲಿ ಹೊರಾಂಗಣ ಚಟುವಟಿಕೆ ಕೈಗೊಳ್ಳಬಾರದು.
- ಮಧ್ಯಾಹ್ನದ ಸಮಯದಲ್ಲಿ ಅಡುಗೆ ಮಾಡುವುದು ತಪ್ಪಿಸಬೇಕು. ಅಡುಗೆ ಸಿದ್ಧಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡಬೇಕು
- ಮದ್ಯಪಾನ, ಚಹಾ, ಕಾಫಿ, ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶ ಹೊಂದಿದ ಪಾನೀಯಗಳಿಂದ ದೂರವಿರಬೇಕು. ಇಂತಹ ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.
- ಮಕ್ಕಳು ಮತ್ತು ಸಾಕು ಪ್ರಾಣಿಗಳನ್ನು ನಿಲ್ಲಿಸಿರುವ ವಾಹನಗಳ ಒಳಗೆ ಬಿಡಬಾರದು. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನ ತಾಪಮಾನವು ಅಪಾಯಕಾರಿ ಆಗಬಹುದು.
ಕೆಲಸ ಮಾಡುವವರು ಮತ್ತು ಮಾಲೀಕರಿಗೆ ಸಲಹೆ
- ಕೆಲಸದ ಸ್ಥಳದಲ್ಲಿ ಕೆಲಸಗಾರರಿಗೆ ಕುಡಿಯಲು ತಣ್ಣನೆ ನೀರಿನ ವ್ಯವಸ್ಥೆ ಮಾಡಬೇಕು. 20 ನಿಮಿಷಗಳಿಗೊಮ್ಮೆ ಒಂದು ಲೋಟ ಅಥವಾ ಅದಕ್ಕಿಂತ ಹೆಚ್ಚು ನೀರು ಕುಡಿಯುವಂತೆ ಗಮನ ವಹಿಸಬೇಕು.
- ಸೂರ್ಯನ ಕಿರಣಗಳು ನೇರವಾಗಿ ಮೈಮೇಲೆ ಬೀಳದಂತೆ ಕೆಲಸಗಾರರು ಎಚ್ಚರವಹಿಸಬೇಕು. ಬಿಸಿಲಿನಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ನೆರಳಿನಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ, ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಬೇಕು.
- ಶ್ರಮದಾಯಕ, ಹೊರಾಂಗಣ ಚಟುವಟಿಕೆಗಳನ್ನು ತಾಪಮಾನ ಕಡಿಮೆ ಇರುವಾಗ (ಬೆಳಗ್ಗೆ ಅಥವಾ ಸಂಜೆ) ನಿರ್ವಹಿಸುವಂತೆ ವೇಳಾಪಟ್ಟಿ ಸಿದ್ಧಗೊಳಿಸಬೇಕು. ಹೊರಾಂಗಣ ಚಟುವಟಿಕೆಗಳಲ್ಲಿ ಕೆಲಸಗಾರರಿಗೆ, ಪ್ರತಿ ಗಂಟೆಗೆ 5 ನಿಮಿಷಗಳ ವಿರಾಮ ನೀಡಬೇಕು.