newsics.com
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ 2025 ರ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದ್ದು, ಪ್ರಮುಖ ಸ್ಪರ್ಧಿಗಳಾದ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜಧಾನಿಯಲ್ಲಿ ಸರ್ಕಾರ ರಚಿಸುವ ಭರವಸೆಯಲ್ಲಿವೆ. ದೆಹಲಿ ವಿಧಾನಸಭೆಯ ಎಲ್ಲಾ 70 ಸ್ಥಾನಗಳಿಗೆ ಫೆಬ್ರವರಿ 5 ರಂದು ಮತದಾನ ನಡೆಯಿತು.
ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, 11 ಕ್ಷೇತ್ರಗಳಲ್ಲಿ ಬಿಜೆಪಿ, 10 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ ಸಾಧಿಸಿದೆ. ಇವು ಬಹಳ ಆರಂಭಿಕ ಪ್ರವೃತ್ತಿಗಳಾಗಿವೆ ಮತ್ತು ಅಂಚೆ ಮತಪತ್ರಗಳನ್ನು ಮೊದಲು ಎಣಿಕೆ ಮಾಡಲಾಗುತ್ತಿದೆ. ಸದ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಎಲ್ಲರಚಿತ್ತ ದೆಹಲಿಯತ್ತ ನೆಟ್ಟಿದೆ.
ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು.ಭಾರತದ ಚುನಾವಣಾ ಆಯೋಗದ (ECI) ಮತದಾರರ ಮತದಾನದ ಅಪ್ಲಿಕೇಶನ್ ಪ್ರಕಾರ, ದೆಹಲಿಯಲ್ಲಿ ಶೇ. 60.54ರಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.
ಆಮ್ ಆದ್ಮಿ ಪಕ್ಷ (ಎಎಪಿ) 2015ರಿಂದ ದೆಹಲಿಯಲ್ಲಿ ಸರ್ಕಾರವನ್ನು ನಡೆಸುತ್ತಿದೆ. ಹೀಗಾಗಿ, ಈ ಬಾರಿಯೂ ಸರ್ಕಾರ ರಚಿಸುವ ಮೂಲಕ ಹ್ಯಾಟ್ರಿಕ್ ಬಾರಿಸುವ ನಿರೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷವಿದೆ. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಭವಿಷ್ಯ ನುಡಿದಿವೆ.