newsics.com
ಮೈಸೂರು: ಬದಲಿ ನಿವೇಶನ ಕೇಳಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಸಿಎಂ ಸಿದ್ದರಾಮಯ್ಯ ಬರೆದಿದ್ದ ಪತ್ರವೊಂದು ಭಾರೀ ವೈರಲ್ ಆಗಿದೆ.
ತಮ್ಮ ಪತ್ನಿ ಪಾರ್ವತಿಯವರು ತಮ್ಮ ಜಮೀನಿನ ಸ್ವಾಧೀನಕ್ಕೆ ಬದಲಿಯಾಗಿ ಇಂತಹದ್ದೇ ಸ್ಥಳದಲ್ಲಿ ನಿವೇಶನಗಳನ್ನು ಕೊಡಿ ಎಂದು ನಾವು ಮುಡಾಗೆ ಕೇಳಿರಲಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯನವರು, ಶಾಸಕರಾಗಿದ್ದಾಗ ಇದೇ ಮುಡಾದಿಂದ ತಮಗೆ ನೀಡಿದ್ದ ನಿವೇಶನಕ್ಕೆ ಬದಲಾಗಿ ಬೇರೆ ಕಡೆ ಬದಲಿ ನಿವೇಶನ ಕೊಡಬೇಕೆಂದು ಅಂದಿನ ಮುಡಾ ಅಧ್ಯಕ್ಷರಿಗೆ ಬರೆದಿದ್ದ ಪತ್ರ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಮುಡಾದಿಂದ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ವಿಜಯನಗರದಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ನಿವೇಶನಗಳನ್ನು ಬದಲಿಯಾಗಿ ಪಡೆದಿರುವ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ಆರೋಪಿಸಿ, ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆ ನಡೆಸಿದಾಗ, ತಮ್ಮ ವಿರುದ್ಧ ಮಾಡಲಾಗುತ್ತಿದ್ದ ಆರೋಪಗಳಿಗೆಲ್ಲಾ ಸ್ಪಷ್ಟನೆ ನೀಡುತ್ತಿದ್ದ ಸಿಎಂ ಸಿದ್ದರಾಮಯ್ಯ, ಮುಡಾ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ. ನನಗೆ ಅಧಿಕಾರ, ಹಣದ ಮೇಲೆ ವ್ಯಾಮೋಹವೂ ಇಲ್ಲ. ನಾನು ನನ್ನ ಅಧಿಕಾರವನ್ನು ಶೋಷಿತರು, ದಲಿತರ ಏಳಿಗೆಗಾಗಿಯೇ ಮೀಸಲಿಟ್ಟಿದ್ದೇನೆ ಎಂಬುದಾಗಿ ಇತ್ತೀಚಿಗಷ್ಟೇ ಹೇಳಿದ್ದರು. ಮುಡಾ ಹಗರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಭಾಗಿಯಾಗಿಯೂ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದರು.
ಇದೇ ಸಂಬಂಧ ಮೈತ್ರಿ ಪಕ್ಷದ ವಿರುದ್ಧ ಜನಾಂದೋಲನ ಸಮಾವೇಶಗಳನ್ನೂ ಮಾಡಿದ್ದರು. ಮೈತ್ರಿ ಪಕ್ಷದವರ ಪಾದಯಾತ್ರೆಯ ಸಮಾರೋಪ ಸಮಾರಂಭ ಮುಗಿದ ಬೆನ್ನಲ್ಲೇ 1984ರಲ್ಲಿ ಸಿದ್ದರಾಮಯ್ಯ ಅವರು ಶಾಸಕರಾಗಿದ್ದಾಗ ಮುಡಾಗೆ ಬದಲಿ ನಿವೇಶನಕ್ಕಾಗಿ ಖುದ್ದು ಬರೆದಿದ್ದ ಪತ್ರ ಈಗ ಸದ್ದು ಮಾಡುತ್ತಿದ್ದು, ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.
ಪತ್ರದಲ್ಲೇನಿದೆ?
1984ರಲ್ಲಿ ಸಿದ್ದರಾಮಯ್ಯ ಅವರು ಶಾಸಕರಾಗಿದ್ದ ವೇಳೆ ಮೈಸೂರಿನ ಅಂದಿನ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಿಗೆ ಬರೆದಿದ್ದ ಪತ್ರದಲ್ಲಿ, ಈ ಕೆಳಗೆ ರುಜು ಮಾಡಿರುವ ಸಿದ್ಧರಾಮಯ್ಯ, ಶಾಸಕರಾದ ನಾನು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವೇದೆಂದರೆ, ನನಗೆ ಮೈಸೂರಿನ ಜಯನಗರ-ತೊಣಚಿಕೊಪ್ಪಲಿನ 2ನೇ ಹಂತ, ಎಂ ಬ್ಲಾಕ್ನಲ್ಲಿ ನಿವೇಶನ ಸಂಖ್ಯೆ-9, ಅಳತೆ 50 * 80 ಅನ್ನು ರೂ.30ರಂತೆ ಕೊಟ್ಟಿರುವುದು ಸರಿಯಷ್ಟೇ. ಸದರಿ ನಿವೇಶನಕ್ಕೆ ಬದಲಾಗಿ ಜಯನಗರ-ತೊಣಚಿಕೊಪ್ಪಲೆ ಜಿ ಮತ್ತು ಹೆಚ್ ಬ್ಲಾಕ್ನಲ್ಲಿ ಖಾಲಿ ಇರುವ 50* 80 ಅಳತೆಯುಳ್ಳ ನಿವೇಶನ ಸಂಖ್ಯೆ 1245 ಅನ್ನು ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂಬುದಾಗಿ ಬರೆಯಲಾಗಿದೆ.
ದಿನಾಂಕ 08-05-1984ರಂದು ಸಿದ್ಧರಾಮಯ್ಯ ಅವರು ಬರೆದಿರುವ ಪತ್ರವನ್ನು ರಿಸೀವ್ ಮಾಡಿಕೊಂಡಿರುವ ಮೈಸೂರಿನ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಸದರಿ ಕ್ರಮಕ್ಕೆ ಸೂಚಿಸಿ ಹಿಂಬರಹವನ್ನು ಬರೆದಿರುವುದೂ ಪತ್ರದಲ್ಲಿ ಕಂಡುಬಂದಿದೆ. ಈ ಪತ್ರವನ್ನು ಮುಂದಿಟ್ಟುಕೊಂಡು ಈಗ ಸಿದ್ದರಾಮಯ್ಯನವರ ಸಾಚಾತನ, ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗುತ್ತಿದೆ.
ಕೊಚ್ಚಿಹೋದ ಕಾರು: ಒಂದೇ ಕುಟುಂಬದ 11 ಮಂದಿ ಪ್ರವಾಹ ಪಾಲು, ಮಗು ಬಚಾವ್, ವಿಡಿಯೊ ನೋಡಿ
ಸೆ.1ರಿಂದ ಹೊಸ ಟೆಲಿಕಾಂ ನಿಯಮ ಜಾರಿ! ನಕಲಿ ಸಿಮ್ಕಾರ್ಡ್ 2 ವರ್ಷದ ವರೆಗೆ ಬ್ಲಾಕ್ಲಿಸ್ಟ್ಗೆ ಸೇರ್ಪಡೆಯಾಗುವ ಸಾಧ್ಯತೆ
ಉದ್ಯೋಗದ ಆಫರ್ ತಿರಸ್ಕರಿಸಿದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸರಬ್ಜೋತ್ ಸಿಂಗ್