newsics.com
ವಯನಾಡು(ಕೇರಳ): ಗುಡ್ಡಗಾಡು ಜಿಲ್ಲೆ ವಯನಾಡಿನಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಸರಣಿ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 133ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಕರ್ನಾಟಕ ಮೂಲದ ಇಬ್ಬರು ಸೇರಿದ್ದಾರೆ.
ಈವರೆಗೆ 450 ಜನರನ್ನು ರಕ್ಷಿಸಲಾಗಿದ್ದು, 98 ಜನ ನಾಪತ್ತೆಯಾಗಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೀಕರ ಸರಣಿ ಭೂಕುಸಿತ ಸಂಭವಿಸಿದ್ದು, ಮುಂಡಕ್ಕಾಯ್ ಪಟ್ಟಣವೇ ಭೂ ಕುಸಿತದಲ್ಲಿ ಕೊಚ್ಚಿ ಹೋಗಿದೆ. ನದಿ ತನ್ನ ದಿಕ್ಕನ್ನೇ ಬದಲಿಸಿದೆ.
ಚಾಮರಾಜನಗರ ಜಿಲ್ಲೆಯ ಪುಟ್ಟ ಸಿದ್ದಿ(62) ಹಾಗೂ ರಾಣಿ ಎಂಬುವರ ತಾಯಿ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅವರು ವಯನಾಡಿನ ಮೆಪ್ಪಾಡಿಯಲ್ಲಿ ವಾಸವಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚಾಮರಾಜನಗರ ತಾಲೂಕು ಇರಸವಾಡಿ ಮೂಲದ ರಾಜನ್ ಹಾಗೂ ರಜನಿ ನಾಪತ್ತೆಯಾಗಿದ್ದಾರೆ. ಇವರು ಕಳೆದ ಮೂವತ್ತು ವರ್ಷಗಳಿಂದ ಕೇರಳದ ಚೂರಲಮಲ್ಲಾದಲ್ಲಿ ವಾಸವಿದ್ದರು. ಇದೀಗ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದು, ರಾಜನ್, ರಜನಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಚಾಮರಾಜನಗರ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅಲ್ಲದೆ ಮುಂಡಕ್ಕಾಯ್‌ನ ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರದ ಗುಂಡ್ಲುಪೇಟೆಯ ಝಾನ್ಸಿರಾಣಿ, ಎರಡೂವರೆ ವರ್ಷದ ಪುತ್ರ ನಿಹಾಲ್ ನಾಪತ್ತೆಯಾಗಿದ್ದಾರೆ
ವಯನಾಡು ಜಿಲ್ಲೆಯ ಮೆಪ್ಪಾಡಿ, ಮುಂಡಕ್ಕಾಯ್, ಚೂರಲ್ಮಲ ಗ್ರಾಮದಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 133ಕ್ಕೆ ಏರಿಕೆಯಾಗಿದೆ
ಭೂಕುಸಿತ ಸ್ಥಳದಲ್ಲಿ ಸುಮಾರು 98ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇನ್ನು 128 ಜನರು ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಗುಡ್ಡ ಕುಸಿತ ಮತ್ತು ಪ್ರವಾಹದಿಂದಾಗಿ ಕೇರಳದ ಒಂದಿಡೀ ಪಟ್ಟಣ ಕೊಚ್ಚಿಕೊಂಡು ಹೋಗಿದೆ. ವರದಿಗಳ ಪ್ರಕಾರ, ಮುಂಡಕ್ಕಾಯ್ ಪಟ್ಟಣವು ಭೂಕುಸಿತದಿಂದ ಸಂಪೂರ್ಣವಾಗಿ ಕೊಚ್ಚಿಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಡಕ್ಕಾಯ್, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಭೀಕರ ಹಾನಿಗೊಳಗಾಗಿದ್ದು, ಮಳೆಯಿಂದಾಗಿ ವಯನಾಡಿನ ಜಲಮೂಲಗಳು ಉಕ್ಕಿ ಹರಿಯುತ್ತಿವೆ. ನದಿಗಳು ತಮ್ಮ ಮಾರ್ಗವನ್ನೇ ಬದಲಾಯಿಸಿದ್ದು, ಜನವಸತಿ ಪ್ರದೇಶಗಳ ಮೂಲಕ ಹರಿಯುತ್ತಿವೆ.
ಮಲಪ್ಪುರಂನ ಚಾಲಿಯಾರ್ ನದಿಯಿಂದ ಹಲವಾರು ಕಿಲೋಮೀಟರ್ ದೂರದಲ್ಲಿ ಹರಿಯುವ ನೀರಿನಿಂದ ಕೊಚ್ಚಿಹೋದ ಕನಿಷ್ಠ 17 ಮೃತದೇಹಗಳು ಪತ್ತೆಯಾಗಿವೆ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಾರ, 34 ಶವಗಳನ್ನು ಗುರುತಿಸಲಾಗಿದೆ ಮತ್ತು 18 ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.