ಚಿನ್ನದಂಗಡಿಗೆ ನುಗ್ಗಿದ ಕಳ್ಳರು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಹಾವೇರಿಯ ಹಾನಗಲ್ ತಾಲೂಕಿನಲ್ಲಿ ನಡೆದಿದೆ.
ಕಳ್ಳತನದ ಉದ್ದೇಶದಿಂದಲೇ ಪಕ್ಕಾ ಪ್ಲಾನ್ ಮಾಡಿಕೊಂಡು ಬಂದಿದ್ದ ಖದೀಮರು, ಅಂಗಡಿಯ ಬೀಗ ಮುರಿದು ಒಳನುಗ್ಗಿದ್ದಾರೆ. ಅಂಗಡಿಯಲ್ಲಿದ್ದ ಸಣ್ಣಪುಟ್ಟ ಕೌಂಟರ್‌ಗಳನ್ನು ಜಾಲಾಡುವುದಷ್ಟೇ ಅಲ್ಲದೆ, ಒಳಗೆ ಇಡಲಾಗಿದ್ದ ಇಡೀ ತಿಜೋರಿಯನ್ನೇ (ಲಾಕರ್) ಸಮೇತ ಹೊತ್ತೊಯ್ದಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ ತಿಜೋರಿಯಲ್ಲಿದ್ದ ಸುಮಾರು 300 ಗ್ರಾಂ ಚಿನ್ನ ಹಾಗೂ ಬರೋಬ್ಬರಿ 25 ಕೆಜಿ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ. ಕದ್ದ ಮಾಲಿನ ಒಟ್ಟು ಮೌಲ್ಯ ಅಂದಾಜು 60 ರಿಂದ 70 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಮಾಸ್ಕ್, ಗ್ಲೌಸ್ ಧರಿಸಿ ಬಂದಿದ್ದ ಹೈಟೆಕ್ ಕಳ್ಳರು
ಯಾವುದೇ ಸುಳಿವು ಸಿಗಬಾರದು ಎಂದು ಕಳ್ಳರು ಅತ್ಯಂತ ಜಾಣತನ ಪ್ರದರ್ಶಿಸಿದ್ದಾರೆ. ಗುರುತು ಸಿಗದಂತೆ ಮುಖಕ್ಕೆ ಮಾಸ್ಕ್ ಧರಿಸಿದ್ದಲ್ಲದೆ, ಬೆರಳಚ್ಚು (Fingerprints) ಸಿಗದಿರಲಿ ಎಂದು ಕೈಗಳಿಗೆ ಗ್ಲೌಸ್ ಧರಿಸಿಕೊಂಡೇ ಈ ಬೃಹತ್ ಕೃತ್ಯ ಎಸಗಿದ್ದಾರೆ. ಕಳ್ಳರು ಚಿನ್ನದಂಗಡಿಯ ಒಳಗೆ ನುಗ್ಗಿ ತಿಜೋರಿ ಎಗರಿಸುತ್ತಿರುವ ದೃಶ್ಯಗಳು ಅಂಗಡಿಯಲ್ಲಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಭೇಟಿ, ಪರಿಶೀಲನೆ
ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಲಕ್ಷ್ಮಣ್ ಶಿರಕೋಳ ಅವರು ಕರಡು ಪೊಲೀಸ್ ಸಿಬ್ಬಂದಿ ಹಾಗೂ ಶ್ವಾನದಳದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕಳ್ಳರ ಪತ್ತೆಗಾಗಿ ವಿಶೇಷ ಜಾಲ ಬೀಸಿದ್ದಾರೆ. ಈ ಘಟನೆಯಿಂದಾಗಿ ಹಾನಗಲ್ ಪರಿಸರದ ವ್ಯಾಪಾರಿ ವಲಯದಲ್ಲಿ ತೀವ್ರ ಆತಂಕ ಮೂಡಿದೆ.