newsics.com
ಚೆನ್ನೈ: ಮೊಬೈಲ್, ಒಟಿಟಿ ವೇದಿಕೆಗಳಿಂದಾಗಿ ಚಲನಚಿತ್ರರಂಗ ಭಾರೀ ಹೊಡೆತ ಅನುಭವಿಸುತ್ತಿರುವ ವೇಳೆಯಲ್ಲೇ ದಕ್ಷಿಣ ಭಾರತದ ಪ್ರಮುಖ ಚಿತ್ರೋದ್ಯಮವಾದ ತಮಿಳು ಚಿತ್ರೋದ್ಯಮ, ತಾತ್ಕಾಲಿಕವಾಗಿ ಚಿತ್ರ ನಿರ್ಮಾಣವನ್ನೇ ಸ್ಥಗಿತಗೊಳಿಸುವ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಜನಪ್ರಿಯ ನಟ, ನಟಿಯರು, ತಂತ್ರಜ್ಞರ ದುಬಾರಿ ಸಂಭಾವನೆ, ಹಣ ಪಡೆದು ಶೂಟಿಂಗ್‌ಗೆ ಆಗಮಿಸದೇ ತೊಂದರೆ ನೀಡುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಚಲನಚಿತ್ರ ಶೂಟಿಂಗ್ ನಿಲ್ಲಿಸಲು ತಮಿಳು ಚಿತ್ರ ನಿರ್ಮಾಪಕರ ಮಂಡಳಿ ನಿರ್ಧರಿಸಿದೆ.
ಮಂಡಳಿ ನಿರ್ಧಾರಕ್ಕೆ ಥಿಯೇಟರ್ ಮಾಲೀಕರ ಸಂಘ, ಚಿತ್ರ ಹಂಚಿಕೆದಾರರ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿವೆ.
ನಟ, ನಟಿಯರು, ತಂತ್ರಜ್ಞರು ಇತ್ತೀಚಿನ ದಿನಗಳಲ್ಲಿ ತಮ್ಮ ಸಂಭಾವನೆ ಭಾರೀ ಪ್ರಮಾಣದಲ್ಲಿ ಏರಿಸಿದ್ದಾರೆ. ಇನ್ನೊಂದೆಡೆ ಭಾರೀ ಹಣ ಪಡೆದ ಮೇಲೂ ನಟರು, ತಂತ್ರಜ್ಞರು ಶೂಟಿಂಗ್ ಅಥವಾ ಇತರೆ ಚಿತ್ರ ಸಂಬಂಧಿ ಕೆಲಸಕ್ಕೆ ಗೈರಾಗಿ ತೊಂದರೆ ನೀಡುತ್ತಿದ್ದಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಯೋಜನೆ ಆರಂಭದ ಬಳಿಕ ಅದಕ್ಕೆ ಕೈಕೊಟ್ಟು ಮತ್ತೊಂದು ಚಿತ್ರ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ನಿರ್ಮಾಪಕರಿಗೆ ಭಾರೀ ನಷ್ಟವಾಗುತ್ತಿದೆ. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಲನಚಿತ್ರರಂಗದ ಚಟುವಟಿಕೆಗಳನ್ನು ಹಂತಹಂತವಾಗಿ ನಿಲ್ಲಿಸಲು ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.