newsics.com
ನಾಗೌರ್(ರಾಜಸ್ಥಾನ): ಮನುಷ್ಯರನ್ನು ಬೈಕ್ ಗೆ ಕಟ್ಟಿ ಎಳೆದೊಯ್ದಿರುವ ಅಮಾನುಷ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಈ ಘಟನೆ ಇಡೀ ಊರಿನವರನ್ನೇ ಬೆಚ್ಚಿಬೀಳಿಸಿದೆ.
ಪ್ರೇಮ್ ರಾಮ್ ಮೇಘವಾಲ್ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ. ಈತನ ಕ್ರೌರ್ಯ ಇಷ್ಟಕ್ಕೇ ನಿಂತಿಲ್ಲ. ಬೈಕ್ ನಿಲ್ಲಿಸಿದ್ದ ಆತ, ಹೆಂಡತಿಯ ಮೇಲೆ ಹತ್ತಿ ನಿಂತಿದ್ದಾನೆ. ಪರಿಣಾಮ ಪತ್ನಿ ತೀವ್ರವಾಗಿ ಗಾಯಗೊಂಡಿದ್ದಾಳೆ. ನೆಲದಲ್ಲಿ ಬಿದ್ದ ಮಹಿಳೆ ಸಹಾಯಕ್ಕಾಗಿ ಜೋರಾಗಿ ಕಿರುಚುತ್ತಿದ್ದರೂ ಸ್ಥಳದಲ್ಲಿದ್ದವರು ಮೂಕಪ್ರೇಕ್ಷಕರಾಗಿ ನಿಂತಿದ್ದರು.
ಪತ್ನಿ ತನ್ನ ತಂಗಿಯ ಮನೆಗೆ ಹೋಗ್ತೀನಿ ಎಂದು ಪತಿ ಮೇಘವಾಲ್ ಬಳಿ ಹೇಳಿದ್ದಾಳೆ. ಎಲ್ಲಿಗೂ ಹೋಗೋದು ಬೇಡ ಎಂದು ಗಂಡ ನಿರಾಕರಿಸಿದ್ದಾನೆ. ಆಗ ಆಕೆ ಮತ್ತಷ್ಟು ಹಠ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಮೇಘವಾಲ್, ಬೈಕ್ ಗೆ ಹಗ್ಗ ಕಟ್ಟಿ, ಇನ್ನೊಂದು ತುದಿಗೆ ಪತ್ನಿಯ ಕಾಲನ್ನು ಕಟ್ಟಿ ದರದರನೆ ನಡುರಸ್ತೆಯಲ್ಲಿ ಎಳೆದೊಯ್ದಿದ್ದಾನೆ.
ಇದು ಕಳೆದೊಂದು ತಿಂಗಳ ಹಿಂದಿನ ವಿಡಿಯೋವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾವಾಗ ಜಾಲತಾಣದಲ್ಲಿ ವೈರಲ್ ಆಯ್ತೋ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿ ವಿಚಾರಣೆ ಮುಂದುವರಿಸಿದ್ದಾರೆ. ಜೀವನಪೂರ್ತಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ತೀನಿ ಎಂದು ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದವಳ ಜತೆ ಈ ರೀತಿ ನಡೆದುಕೊಂಡಿದ್ದು ಕ್ರೌರ್ಯದ ಪರಮಾವಧಿಯೇ ಸರಿ.