Subscribe ನ್ಯೂಸಿಕ್ಸ್ ಕನ್ನಡ
newsics.com
ಗೌರಿಬಿದನೂರು: ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರು ವಿದ್ಯಾರ್ಥಿಯೊಬ್ಬನನ್ನು ಪ್ರಜ್ಞೆ ತಪ್ಪುವಂತೆ ಥಳಿಸಿರುವ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ.
8ನೇ ತರಗತಿಯಲ್ಲಿ ಓದುತ್ತಿರುವ ಸುಶಾಂತ್ ಪಕ್ಕದ ವಿದ್ಯಾರ್ಥಿ ಪುಸ್ತಕದಲ್ಲಿನ ಹಾಳೆ ಹಾರಿದ್ದಾನೆ ಎಂಬ ಕಾರಣಕ್ಕೆ ಐದಾರು ಶಿಕ್ಷಕರು ಒಬ್ಬರ ನಂತರ ಮತ್ತೊಬ್ಬರು ಥಳಿಸಿದ್ದಾರೆ.
ತಾನು ಹಾಳೆ ಹರಿದಿಲ್ಲ ಎಂದು ವಿದ್ಯಾರ್ಥಿ ಗೋಗರೆದರೂ, ಕೇಳದ ಶಿಕ್ಷಕರು ಪ್ರಜ್ಞೆ ತಪ್ಪುವಂತೆ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಾಗ ಗಾಬರಿಗೊಂಡ ಶಾಲಾ ಆಡಳಿತ ಮಂಡಳಿಯವರು ಶಾಲಾ ವಾಹನದಲ್ಲೇ ನಗರದ ಮಾನಸ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಚಿಕಿತ್ಸೆ ಬಳಿಕ ಸಂಜೆ ಮಾತನಾಡಿದ ವಿದ್ಯಾರ್ಥಿ ಸುಶಾಂತ್, ‘ನನ್ನ ಪಕ್ಕದ ವಿದ್ಯಾರ್ಥಿ ಪುಸ್ತಕದಲ್ಲಿ ಹೋಮ್ ವರ್ಕ್ ನೋಡಿಕೊಂಡು ಬರೆಯುತ್ತಿದ್ದೆ. ಆದರೆ, ಶಿಕ್ಷಕರು ನಾನು ಬೇರೊಬ್ಬರ ಪುಸ್ತಕ ಹಾಳೆ ಹರಿದಿದ್ದೇನೆ ಎಂದು ಹೇಳಿ ಮನಸ್ಸಿಗೆ ಬಂದಂತೆ ಹೊಡೆದಿದ್ದಾರೆ. ಆದರೆ, ನಾನು ಯಾರ ಪುಸ್ತಕ ಹಾಳೆಯನ್ನು ಹರಿದಿಲ್ಲ’ ಎಂದು ಹೇಳಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸುವುದಾಗಿ ಬಾಲಕನ ತಾಯಿ ಕವಿತಾ ತಿಳಿಸಿದ್ದಾರೆ.