Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಲಂಡನ್: ಎಂಟು ವರ್ಷದ ಹಿಂದೂ ವಿದ್ಯಾರ್ಥಿಯೊಬ್ಬ ಹಣೆಯ ಮೇಲೆ ಹಚ್ಚಿಕೊಳ್ಳುವ ಪವಿತ್ರ ಹಿಂದೂ ಸಂಕೇತವಾದ ಕುಂಕುಮ ಧರಿಸಿದ್ದಕ್ಕಾಗಿ ತಾರತಮ್ಯ ಎದುರಿಸಿದ ಘಟನೆ ಲಂಡನ್‌ನಲ್ಲಿ ನಡೆದಿದೆ.
8 ವರ್ಷದ ಬಾಲಕ ಶಾಲೆಯಲ್ಲಿ ಬಿಡುವಿನ ಸಮಯದಲ್ಲಿ ಆಟವಾಡುವಾಗ ಆ ಶಾಲೆಯ ಮುಖ್ಯೋಪಾಧ್ಯಯರು ಆತನ ಬೆನ್ನುಬಿದ್ದು, ನಿರಂತರವಾಗಿ ಆತನನ್ನು ಮುಜುಗರಕ್ಕೊಳಗಾಗುವಂತೆ ಮೇಲ್ವಿಚಾರಣೆ ಮಾಡುತ್ತಾ ಇರುವುದರಿಂದ ಆ ಬಾಲಕ ಗೆಳೆಯರೊಂದಿಗೆ ಆಟವನ್ನು ಸಹ ಆಡದೇ ಒಂಟಿಯಾಗಿ ಇರುವಂತಹ ಪರಿಸ್ಥಿತಿ ಉಂಟಾಗಿದ್ದು, ಕೊನೆಗೆ ಆ ಬಾಲಕ ಶಾಲೆಯನ್ನೇ ಬಿಟ್ಟು ಬೇರೆ ಶಾಲೆಗೆ ಸೇರಿರುವ ಘಟನೆ ನಡೆದಿದೆ.
ಈ ಘಟನೆ ಕುರಿತು ಬ್ರಿಟಿಷ್ ಹಿಂದೂ ಮತ್ತು ಭಾರತೀಯ ಸಮುದಾಯವನ್ನು ಪ್ರತಿನಿಧಿಸುವ ಸಾಮಾಜಿಕ ಚಳುವಳಿ ಮತ್ತು ವಕಾಲತ್ತು ಸಂಸ್ಥೆಯಾದ ಇನ್ಸೈಟ್ ಯುಕೆ ಆಕ್ರೋಶ ವ್ಯಕ್ತಪಡಿಸಿದೆ. ಇವರ ಪ್ರಕಾರ, ಲಂಡನ್ ನಲ್ಲಿರುವ ವಿಕಾರ್ಸ್ ಗ್ರೀನ್ ಪ್ರೈಮರಿ ಶಾಲೆಯ ಈ ಬಾಲಕ ವ್ಯಾಸಂಗ ಮಾಡುತ್ತಿದ್ದನು. ಈ ವೇಳೆ ಆ ಬಾಲಕ ಹಿಂದೂ ಧರ್ಮದ ಧಾರ್ಮಿಕ ಸಂಕೇತವಾಗಿರುವ ತಿಲಕವನ್ನು ಧರಿಸಿದ್ದಾಕ್ಕಾಗಿ ಅಲ್ಲಿನ ಸಿಬ್ಬಂದಿಗಳು ಆತನನ್ನು ಇದರ ಬಗ್ಗೆ ವಿವರಣೆ ನೀಡಲು ಒತ್ತಾಯ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಬಾಲಕನ ಪೋಷಕರು ಸೇರಿದಂತೆ ಉಳಿದ ಹಿಂದೂ ವಿದ್ಯಾರ್ಥಿಗಳ ಪೋಷಕರು ಮುಖ್ಯೋಪಾಧ್ಯಾಯರು ಮತ್ತು ಶಾಲಾ ಆಡಳಿತ ಮಂಡಳಿಗೆ ಹಿಂದೂ ಆಚರಣೆಗಳ, ತಿಲಕ-ಚಂದಲೋ ಧಾರ್ಮಿಕ ಮಹತ್ವದ ಬಗ್ಗೆ ತಿಳುವಳಿಕೆ ನೀಡುವ ಮೂಲಕ ವಿವರಣೆ ನೀಡಲು ಮುಂದಾದರೂ ಸಹ ಶಾಲಾ ಆಡಳಿತ ಮಾತ್ರ ಹಿಂದೂ ಧಾರ್ಮಿಕ ಆಚರಣೆಗಳನ್ನು ಗುರುತಿಸುವುದಾಗಲಿ ಅಥವಾ ಅರ್ಥಮಾಡಿಕೊಳ್ಳುವುದಾಗಲಿ ಮಾಡದೇ ಏಕಾಏಕಿ ವಿವರಣೆಗಳನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಧಾರ್ಮಿಕ ಆಚರಣೆಯಿಂದಾಗಿಯೇ ಆ ಮಗುವನ್ನು ಶಾಲೆಯೊಳಗಿನ ಜವಾಬ್ದಾರಿಯುತ ಸ್ಥಾನಗಳಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಕೃತ್ಯವು ಸಾಬೀತಾದರೆ, ಅದು ಯುಕೆಯ ಸಮಾನತೆ ಕಾಯ್ದೆ 2010 ರ ಅಡಿಯಲ್ಲಿ ನೇರ ಧಾರ್ಮಿಕ ತಾರತಮ್ಯಕ್ಕೆ ಸಮನಾಗಿರುತ್ತದೆ, ಇದು ಧರ್ಮದ ಆಧಾರದ ಮೇಲೆ ವ್ಯಕ್ತಿಗಳನ್ನು ತಾರತಮ್ಯದಿಂದ ರಕ್ಷಿಸುತ್ತದೆ ಎಂದು ಆರೋಪಿಸಲಾಗಿದೆ.