Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಯುವಕನೊಬ್ಬನ ನಿರಂತರ ಕಿರುಕುಳದಿಂದ ನೊಂದ 15 ವರ್ಷದ ಬಾಲಕಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ನಡೆದಿದೆ.
ಬಾಲಕಿಯ ಸಾವಿಗೆ ಕೃಷ್ಣ ಎಂಬ ಯುವಕ ನೀಡುತ್ತಿದ್ದ ನಿರಂತರ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮೃತ ಬಾಲಕಿಯು ದಿನನಿತ್ಯ ಶಾಲೆಗೆ ತೆರಳುವಾಗ ಕೃಷ್ಣ ಎಂಬಾತ ಆಕೆಯನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ಬಾಲಕಿಯ ಕುಟುಂಬಸ್ಥರು, ಈ ಹಿಂದೆ ಯುವಕನ ಮನೆಗೆ ತೆರಳಿ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದರು. ಆ ಸಮಯದಲ್ಲಿ ಯುವಕನ ಪೋಷಕರು ‘ಇನ್ನೊಮ್ಮೆ ಹೀಗೆ ಆಗುವುದಿಲ್ಲ’ ಎಂದು ಕ್ಷಮೆ ಕೇಳಿ ಪ್ರಕರಣವನ್ನು ತಿಳಿಗೊಳಿಸಿದ್ದರು.
ಆದರೆ, ಪುನಃ ಜನವರಿ 18ರಂದು ಗ್ರಾಮದಲ್ಲಿ ಜಾತ್ರೆಯ ಸಂಭ್ರಮವಿತ್ತು. ಈ ವೇಳೆ ಕೃಷ್ಣ ಮತ್ತೆ ಬಾಲಕಿಯನ್ನು ಚುಡಾಯಿಸಿ ಕಿರುಕುಳ ನೀಡಿದ್ದಾನೆ ಎಂದು ಹೇಳಲಾಗಿದೆ. ಅಂದೇ ಸಂಜೆ ಬಾಲಕಿ ನಾಪತ್ತೆಯಾಗಿದ್ದಾಳೆ. ಗಾಬರಿಗೊಂಡ ಕುಟುಂಬಸ್ಥರು ರಾತ್ರಿಯಿಡೀ ಗ್ರಾಮದ ಮೂಲೆ ಮೂಲೆಗಳಲ್ಲಿ ಹುಡುಕಾಡಿದರೂ ಆಕೆ ಪತ್ತೆಯಾಗಿರಲಿಲ್ಲ. ಆದರೆ, ಮರುದಿನ ಬೆಳಿಗ್ಗೆ ಗ್ರಾಮದ ಬಾವಿಯೊಂದರಲ್ಲಿ ಬಾಲಕಿಯ ಶವ ತೇಲುತ್ತಿರುವುದು ಕಂಡುಬಂದಿದೆ.
ಪೊಲೀಸರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಸದ್ಯ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದು ಸ್ಪಷ್ಟವಾಗಬೇಕಿದೆ