Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಗಳು ಸಮೃದ್ಧವಾಗಿದ್ದು ಇದು ನಮ್ಮನ್ನು ಹಲವು ರೀತಿಯ ಕಾಯಿಲೆಗಳಿಂದ ದೂರ ಇರಿಸುವಲ್ಲಿ ಪರಿಣಾಮಕಾರಿ ಆಗಿದೆ.ಬಾಳೆಹಣ್ಣು ಹಣ್ಣಾಗುತ್ತಿದ್ದಂತೆ ಅದರ ರುಚಿ ಮತ್ತು ಪೌಷ್ಟಿಕಾಂಶದ ಮೌಲ್ಯವು ಬದಲಾಗುತ್ತದೆ.
ಚೆನ್ನಾಗಿ ಮಾಗಿದ ಬಾಳೆಹಣ್ಣು, ಹೊಸದಾಗಿ ಮಾಗಿದ ಬಾಳೆಹಣ್ಣಿಗಿಂತ ಹೆಚ್ಚಿನ ಸಿಹಿಯನ್ನು ಹೊಂದಿರುತ್ತದೆ. ಹೊಸದಾಗಿ ಮಾಗಿದ ಬಾಳೆಹಣ್ಣನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ನೀವು ಇದರ ಸಂಪೂರ್ಣ ಲಾಭವನ್ನು ಪಡೆಯಲು ಬಯಸಿದರೆ ಬಾಳೆಹಣ್ಣನ್ನು ಯಾವ ಸಮಯದಲ್ಲಿ ತಿನ್ನಬೇಕು ಎಂಬ ಬಗ್ಗೆಯೂ ತಿಳಿದಿರುವುದು ಅವಶ್ಯಕವಾಗಿದೆ.
ಬೆಳಿಗ್ಗೆ ಎದ್ದ ತಕ್ಷಣ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಇದರಲ್ಲಿರುವ ವಿಟಮಿನ್ ಬಿ6 ಮತ್ತು ಪೊಟ್ಯಾಸಿಯಮ್ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೆಳಿಗ್ಗೆ ಎದ್ದು ಬಾಳೆಹಣ್ಣು ತಿನ್ನುವುದು ಬಹಳ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಜಿಮ್ಗೆ ಹೋಗುವ ಮೊದಲು ಅಥವಾ ವ್ಯಾಯಾಮ ಮಾಡುವ ಮೊದಲು 1 ಅಥವಾ 2 ಬಾಳೆಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಬಾಳೆಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್ಗಳು ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ. ಹೆಚ್ಚುವರಿಯಾಗಿ, ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಸ್ನಾಯು ಸೆಳೆತವನ್ನು ತಡೆಯುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.
ಊಟದ ನಂತರ ಬಾಳೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ವೇಗಗೊಳ್ಳುತ್ತದೆ. ಬಾಳೆಹಣ್ಣಿನಲ್ಲಿರುವ ನಾರಿನಾಂಶ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಸಂಜೆ 4 ರಿಂದ 6 ಗಂಟೆಯ ನಡುವೆ ಹಸಿವಾದಾಗ ಜಂಕ್ ಫುಡ್ ತಿನ್ನುವ ಬದಲು ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಎಣ್ಣೆ ತಿಂಡಿ ತಿನ್ನುವ ಅಭ್ಯಾಸವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ. ಹಾಗಾಗಿ ಮಕ್ಕಳು ಶಾಲೆಯಿಂದ ಬಂದ ಬಳಿಕ ಒಂದು ಬಾಳೆಹಣ್ಣನ್ನು ಕೊಡಿ. ಆದರೆ ಯಾವುದೇ ಕಾರಣಕ್ಕೂ 7 ಗಂಟೆಯ ನಂತರ ಸಾಧ್ಯವಾದಷ್ಟು ಹಣ್ಣುಗಳ ಸೇವನೆ ಮಾಡುವುದನ್ನು ತಪ್ಪಿಸಿ.