Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಬಳ್ಳಾರಿಯಲ್ಲಿ ನಡೆದಿದ್ದ ಬ್ಯಾನರ್ ಗಲಾಟೆ ವೇಳೆ ಗುಂಡಿನ ದಾಳಿಯಿಂದ ಓರ್ವ ಸಾವನ್ನಪ್ಪಿದ ಪ್ರಕರಣವು ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ರಾಜ್ಯ ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿದೆ.
ಪ್ರಕರಣದ ಕಾವು ಹೆಚ್ಚಾಗುತ್ತಿದ್ದಂತೆ ಪ್ರತಿ ಪಕ್ಷಗಳು ಕೇಂದ್ರ ತನಿಖಾ ಸಂಸ್ಥೆಗಳಿಗೆ ಪ್ರಕರಣ ವರ್ಗಾವಣೆ ಮಾಡುವಂತೆ ಒತ್ತಡ ಹಾಕಿದ್ದವು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದೆ. ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲ ಪ್ರಕರಣವನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಪ್ರಕರಣದಲ್ಲಿ ಗನ್ ಮ್ಯಾನ್ ಗುರುಚರಣ್ ಸಿಂಗ್ ಹೊರತುಪಡಿಸಿ ಉಳಿದ 25 ಆರೋಪಿಗಳಿಗೆ ಶುಕ್ರವಾರ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯಲ್ಲಿ 6 ಪ್ರಕರಣ ದಾಖಲಾಗಿವೆ.
ಗನ್‌ಮ್ಯಾನ್‌ಗಳಾದ ಗುರುಚರಣ್ ಸಿಂಗ್, ಬಲ್ಜಿತ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಸೇರಿದಂತೆ ಕಾಂಗ್ರೆಸ್‌ನ 10, ಬಿಜೆಪಿಯ 11 ಕಾರ್ಯಕರ್ತರು ಸೇರಿದಂತೆ ಒಟ್ಟು 26 ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಕ್ರೈಮ್ ನಂಬರ್ 4ರಲ್ಲಿನ 25 ಬಂಧಿತ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಮುಖ ಆರೋಪಿ ಖಾಸಗಿ ಗನ್ ಮ್ಯಾನ್ ಗುರುಚರಣ್ ಸಿಂಗ್ಗೆ ಸಂಬಂಧಿಸಿದ ಗನ್‌ನಿಂದಲೇ 12 ಎಂಎಂ ಬುಲೆಟ್ ಫೈರ್ ಆಗಿರುವ ಹಿನ್ನೆಲೆಯಲ್ಲಿ ಆತನಿಗೆ ನ್ಯಾಯಾಲಯವು ಜಾಮೀನು ನೀಡಿಲ್ಲ ಎಂದು ತಿಳಿದುಬಂದಿದೆ.
ಮೊದಲು ಶೂಟ್ ಮಾಡ್ತೀವಿ, ಆಮೇಲೆ ಪ್ರಶ್ನೆ ಕೇಳ್ತೀವಿ: ಅಮೆರಿಕಾಗೆ ಡೆನ್ಮಾರ್ಕ್ ವಾರ್ನಿಂಗ್