newsics.com
ಸೇಲಂ(ತಮಿಳುನಾಡು): ಇಲ್ಲಿನ ವ್ಯಕ್ತಿಯೊಬ್ಬರು ಅನ್ಯಲೋಕದ ದೇವರಿಗಾಗಿ ದೇವಾಲಯ ನಿರ್ಮಿಸಿದ್ದಾರೆ.
ಅನ್ಯಲೋಕದ ಈ ದೇವರು ಭೂಲೋಕದ ತನ್ನ ಭಕ್ತರನ್ನು ನೈಸರ್ಗಿಕ ವಿಕೋಪಗಳಿಂದ (natural disasters) ರಕ್ಷಿಸುವ ಶಕ್ತಿ ಹೊಂದಿದ್ದಾನೆ ಎನ್ನುತ್ತಾರೆ, ಈ ದೇವಸ್ಥಾನ ನಿರ್ಮಿಸಿದ ಮಲ್ಲಮೂಪಂಬಟ್ಟಿಯ ಲೋಗನಾಥನ್.
ಸುಮಾರು ಮುಕ್ಕಾಲು ಎಕರೆ ಭೂಮಿಯಲ್ಲಿ ಅನ್ಯಗ್ರಹ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. “ನಾನು ಅನ್ಯಗ್ರಹ ಜೀವಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ದೇವಾಲಯವನ್ನು ನಿರ್ಮಿಸಲು ಅವರಿಂದ ಅನುಮತಿ ಸಹ ಪಡೆದಿದ್ದೇನೆ” ಎಂದು ಅವರು ಹೇಳಿದ್ದಾರೆ.
ಪರಕೀಯ ‘ದೇವರು’ ಅಲ್ಲದೆ ಶಿವ, ಪಾರ್ವತಿ, ಮುರುಗನ್, ಕಾಳಿ ಮುಂತಾದ ದೇವ-ದೇವತೆಗಳ ವಿಗ್ರಹಗಳನ್ನೂ ಈ ದೇವಾಲಯದಲ್ಲಿ ಸ್ಥಾಪಿಸಲಾಗಿದೆ. ನೆಲದಿಂದ 11 ಅಡಿ ಕೆಳಗಿರುವ ನೆಲಮಾಳಿಗೆಯಲ್ಲಿ ಈ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
ಲೋಗನಾಥನ್ ಅವರು ಅನ್ಯಗ್ರಹ ಜೀವಿಗಳಿಗಾಗಿ ನಿರ್ಮಿಸುತ್ತಿರುವ ದೇಗುಲದ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದ್ದು, ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿರುವುದರಿಂದ ಈ ದೇವಾಲಯದ ಕುರಿತು ಚರ್ಚೆ ನಡೆದಿದೆ.
ನೈಸರ್ಗಿಕ ವಿಕೋಪಗಳು ಹೆಚ್ಚುತ್ತಿರುವಾಗ, ಅವುಗಳನ್ನು ತಡೆಯುವ ಶಕ್ತಿ ಅನ್ಯಗ್ರಹ ಜೀವಿಗಳಿಗೆ ಇದೆ ಎಂದು ಲೋಗನಾಥನ್ ಅವರು ನಂಬುತ್ತಾರೆ. ಬಾಳೆ ಎಲೆಯನ್ನು ದೇಹಕ್ಕೆ ಸುತ್ತಿಕೊಂಡರೆ ಅನ್ಯಗ್ರಹ ಜೀವಿಗಳ ವಿಕಿರಣದಿಂದ ಪಾರಾಗಬಹುದು ಎಂಬ ಹೇಳಿಕೆಯನ್ನೂ ಲೋಗನಾಥನ್ ನೀಡಿದ್ದಾರೆ.