Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮೈಸೂರು: ಇಷ್ಟು ದಿನ ಕಾಡಂಚಿನ ಗ್ರಾಮಗಳಲ್ಲಿ ಓಡಾಡುತ್ತಿದ್ದ ಹುಲಿಯೊಂದು ಇದೀಗ ಮೈಸೂರು ನಗರಕ್ಕೂ ಕಾಲಿಟ್ಟಿದೆ.
ನಗರದ ಬಿಇಎಂಎಲ್ ಕಾರ್ಖಾನೆಯ ಆವರಣದಲ್ಲಿ ಶನಿವಾರ ರಾತ್ರಿ ಹುಲಿಯೊಂದು ಪ್ರತ್ಯಕ್ಷವಾಗಿದೆ. ಅಧಿಕಾರಿಯೊಬ್ಬರು ಕಾರಿನಲ್ಲಿ ಕಾರ್ಖಾನೆ ಒಳಗೆ ಹೋಗುತ್ತಿದ್ದ ವೇಳೆ ಅವರ ಮುಂದೆ ಹುಲಿ ಪ್ರತ್ಯಕ್ಷವಾಗಿದೆ. ಅವರು ಈ ದೃಶ್ಯವನ್ನು ಕಾರಿನಲ್ಲಿಯೇ ಕುಳಿತು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದರಿಂದ ಮೈಸೂರಿನ ಜನರು ಬೆಚ್ಚಿ ಬಿದ್ದಿದ್ದಾರೆ. ಬಿಇಎಂಎಲ್ ಕಾರ್ಖಾನೆ ನೂರಾರು ಎಕರೆ ಪ್ರದೇಶದಲ್ಲಿ ಕುರುಚಲು ಗಿಡಗಳಿದ್ದು, ಕಾಡು ಪ್ರದೇಶದಂತಹ ವಾತಾವರಣವಿದೆ. ಈ ಪ್ರದೇಶದಲ್ಲಿ ಆಗಾಗ ಚಿರತೆಗಳು ಓಡಾಡುತ್ತಿರುವ ಸುದ್ದಿಗಳು ಕೇಳಿಬರುತ್ತಿದ್ದವು. ಇದೀಗ ಹುಲಿ ಬಂದಿರುವ ಸುದ್ದಿ ಹೊರಬಿದ್ದಿದೆ. ಕೆಲ ದಿನಗಳ ಹಿಂದೆ ಇಲವಾಲ ಸಮೀಪ ಹುಲಿಗಳು ಪ್ರತ್ಯಕ್ಷವಾಗಿದ್ದವು. ಹುಲಿಗಳನ್ನು ನೋಡಿರುವುದಾಗಿ ಕೆಲವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಅವುಗಳ ಸುಳಿವು ಪತ್ತೆಯಾಗಿರಲಿಲ್ಲ. ಇದೀಗ ಬಿಇಎಂಎಲ್ ಕಾರ್ಖಾನೆ ಬಳಿ ಹುಲಿ ಓಡಾಡಿರುವ ವಿಡಿಯೋ ಸಿಕ್ಕಿರುವುದು ಅನುಮಾನಗಳಿಗೆ ಪುಷ್ಠಿ ನೀಡಿದೆ.
ಹೆಡತಲೆ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ, ಬೆಚ್ಚಿಬಿದ್ದ ಶಿಕ್ಷಕಿ:
ಮತ್ತೊಂದೆಡೆ ಬೈಕಿನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿಕ್ಷಕಿ ಬೆಚ್ಚಿಬಿದ್ದು, ಗ್ರಾಮಸ್ಥರು ಆತಂಕಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ಸರ್ಕಾರಿ ಶಾಲೆ ಶಿಕ್ಷಕಿ ದೇವಿಕ ಎಂಬವರು ಬೆಳಗಿನ ತರಗತಿ ನಿಮಿತ್ತ ಬದನವಾಳು, ಬಸವಟ್ಟಿಗೆ ಗ್ರಾಮದ ಮೂಲಕ ಹೆಡತಲೆ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಗ್ರಾಮದ ತುಸು ದೂರದಲ್ಲಿರುವ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ ಬಳಿ ಹುಲಿ ಅಡ್ಡಲಾಗಿ ಬಂದ ಪರಿಣಾಮ ಬೆಚ್ಚಿಬಿದ್ದಿದ್ದಾರೆ.
ತಕ್ಷಣವೇ ರೈತ ಸಂಘದವರಿಗೆ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿ, ಪಿಡಿಒ ರಾಜಶೇಖರ್ ಬೇವಿನಹಳ್ಳಿ ಗ್ರಾಮದಲ್ಲಿ ಟಾಮ್, ಟಾಮ್ ಹಾಕಿಸಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.
ನಂಜನಗೂಡಿನ ವಲಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್ ಹಾಗೂ ಉಪ ವಲಯ ಅರಣ್ಯ ಅಧಿಕಾರಿ ಸತೀಶ್ ಮತ್ತು ಹತ್ತಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. ಹುಲಿ ಕಾಣಿಸಿಕೊಂಡಿರುವ ಸ್ಥಳದಲ್ಲಿ ಏಳು ಕ್ಯಾಮರಾಗಳನ್ನು ಅಳವಡಿಸಿ ಹುಲಿ ಚಲನವಲನದ ಬಗ್ಗೆ ನಿಗಾ ವಹಿಸಿದ್ದಾರೆ.
https://www.facebook.com/share/r/17h25zw5s2/
ಲೈಂಗಿಕ ಕಿರುಕುಳಕ್ಕೆ ನೊಂದು ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮ*ಹತ್ಯೆ
ದಕ್ಷಿಣ ಕನ್ನಡ ಹಾಗೂ ತುಮಕೂರಿನ ಜೇನುತುಪ್ಪದ ಸ್ವಾದವನ್ನು ಹೊಗಳಿದ ಪ್ರಧಾನಿ ಮೋದಿ