Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಇಂಡಿಗೋ ವಿಮಾನ ಲ್ಯಾಂಡ್ ಆಗುವ ವೇಳೆ ಭಾರೀ ಶಬ್ಧ ಕೇಳಿಬಂದ ಕಾರಣ, ಪ್ರಯಾಣಿಕರು ಹಾಗೂ ಸಿಬ್ಬಂದಿ ಆತಂಕಕ್ಕೊಳಗಾದ ಘಟನೆ ಶನಿವಾರ ನಡೆಯಿತು.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ 6E7162 ಇಂಡಿಗೋ ವಿಮಾನ ಸಂಜೆ 6.45ಕ್ಕೆ ಬಿಟ್ಟಿತ್ತು. 7.45ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಇಲ್ಲಿ ಕೆಳಕ್ಕಿಳಿಯುವಾಗಲೇ ವಿಮಾನದಿಂದ ದೊಡ್ಡದಾದ ಶಬ್ದ ಕೇಳಿ ಬಂತು. ಆದರೆ, ಆ ಶಬ್ದ ಏನು ಎಂಬುದು ಮಾತ್ರ ಗೊತ್ತಾಗಲಿಲ್ಲ. ಕ್ಷಣಾರ್ಧದಲ್ಲಿ ವಿಮಾನ ಮತ್ತೆ ಮೇಲೇರಿತು. ವಿಮಾನದೊಳಗೆ ಕೂಡಾ ಈ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಇದರಿಂದಾಗಿ 7.45ಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ 8.15ಕ್ಕೆ ಲ್ಯಾಂಡ್ ಮಾಡಲಾಗಿದೆ.
ವಿಮಾನದಲ್ಲಿ ಬೆಂಗಳೂರಿನಿಂದ 70 ಜನ ಪ್ರಯಾಣಿಕರು ಆಗಮಿಸಿದ್ದರು. ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಿದ್ದಂತೆ ಪ್ರಯಾಣಿಕರು, ವಿಮಾನದ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಎಲ್ಲರೂ ನಿಟ್ಟಿಸಿರು ಬಿಟ್ಟರು. ಭಾರೀ ಶಬ್ಧದ ಕಾರಣ ಮತ್ತೆ ಮೇಲೇರಿ 15 ನಿಮಿಷ ಹಾರಾಟ ಬಳಿಕ ಲ್ಯಾಂಡ್ ಆಯಿತು. ತಾಂತ್ರಿಕ ದೋಷದಿಂದಾಗಿ ಶಬ್ಧ ಕೇಳಿಬಂತು ಎನ್ನಲಾಗಿದೆಯಾದರೂ, ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.