newsics.com | ನ್ಯೂಸಿಕ್ಸ್
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯು ಅಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದು, ಜುಲೈ 28, 2026ರ ಬೆಳಿಗ್ಗೆ 8 ಗಂಟೆಯವರೆಗೆ ರಾಜ್ಯದ ವಿವಿಧ ಭಾಗಗಳ ಹವಾಮಾನ ವರದಿಯನ್ನು ಪ್ರಕಟಿಸಲಾಗಿದೆ. ಕರಾವಳಿ ಹಾಗೂ ಮಲೆನಾಡಿನ ಕೆಲ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುವ ಮುನ್ಸೂಚನೆ ಇದ್ದರೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಬಿಸಿಲು ಹಾಗೂ ಮೋಡಕವಿದ ವಾತಾವರಣ ಮುಂದುವರಿಯಲಿದೆ.
ವಿವಿಧ ಪ್ರದೇಶಗಳ ಹವಾಮಾನ ವರದಿಯ ವಿವರ
- ಕರಾವಳಿ ಜಿಲ್ಲೆಗಳು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಮಳೆಯ ನಡುವೆ ಬಿಡುವಿನ ಅವಧಿ ಹೆಚ್ಚಿರಲಿದ್ದು, ಮುಂದಿನ 10 ದಿನಗಳ ಕಾಲ ದಿನದ ಸರಾಸರಿ ಮಳೆಯ ಪ್ರಮಾಣ 20 ರಿಂದ 30 ಮಿ.ಮೀ ಇರಲಿದೆ. ಸದ್ಯಕ್ಕೆ ಈ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳು ಕಡಿಮೆ ಇವೆ.
- ಮಲೆನಾಡು ಜಿಲ್ಲೆಗಳು: ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಲಿದೆ. ಕರಾವಳಿಗೆ ಹೊಂದಿಕೊಂಡಿರುವ ಗಡಿ ಭಾಗಗಳಲ್ಲಿ ಮಳೆಯ ತೀವ್ರತೆ ಸ್ವಲ್ಪ ಹೆಚ್ಚಿರಬಹುದು. ಮುಂಬರುವ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯಲಿದ್ದರೂ, ದಿನ ಕಳೆದಂತೆ ಮಳೆಯ ಅಬ್ಬರ ಕ್ರಮೇಣ ತಗ್ಗುವ ಸಾಧ್ಯತೆಯಿದೆ.
- ಉತ್ತರ ಒಳನಾಡು: ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ. ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ತುಂತುರು ಮಳೆ ಬೀಳಬಹುದು. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡಕವಿದ ವಾತಾವರಣ ಮುಂದುವರಿಯಲಿದೆ.
- ದಕ್ಷಿಣ ಒಳನಾಡು: ಬೆಂಗಳೂರು ನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಮುಖ್ಯವಾಗಿ ಬಿಸಿಲು ಮತ್ತು ಮೋಡದ ವಾತಾವರಣವಿರಲಿದ್ದು, ಆಗಸ್ಟ್ 2ರಿಂದ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆಯಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವ: ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ದುರ್ಬಲಗೊಂಡಿದ್ದ ಮುಂಗಾರು, ಪ್ರಸ್ತುತ ಪಶ್ಚಿಮ ಬಂಗಾಳ ಕರಾವಳಿಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ. ಈ ವಾಯುಭಾರ ಕುಸಿತವು ಜಾರ್ಖಂಡ್ ಹಾಗೂ ಮಧ್ಯಪ್ರದೇಶದ ಮೂಲಕ ಸಾಗುವ ಸಾಧ್ಯತೆಗಳಿವೆ.
Mekedatu Project ಮೇಕೆದಾಟು ಯೋಜನೆಗೆ ತಮಿಳುನಾಡು ಅನುಮತಿ ಅಗತ್ಯವಿಲ್ಲ; ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ