newsics.com | ನ್ಯೂಸಿಕ್ಸ್
ನವದೆಹಲಿ: ಕರ್ನಾಟಕದ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ‘ಮೇಕೆದಾಟು ಯೋಜನೆ’ಗೆ ನೆರೆರಾಜ್ಯ ತಮಿಳುನಾಡಿನ ಸಮ್ಮತಿ ಅಥವಾ ಅನುಮತಿಯ ಯಾವುದೇ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ. ರಾಜ್ಯಸಭೆಯಲ್ಲಿ ತಮಿಳುನಾಡಿನ ಸಂಸದ ಅನ್ಬುಮಣಿ ರಾಮದಾಸ್ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ, ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಈ ಮಹತ್ವದ ವಿಷಯ ಬಹಿರಂಗಗೊಂಡಿದೆ.
ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ 2018ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ, ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕೆಳಭಾಗದ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಉಲ್ಲೇಖಿಸಲಾಗಿದೆಯೇ? ಪ್ರಸ್ತಾವಿತ ಮೇಕೆದಾಟು ಯೋಜನೆಗೆ ಕರ್ನಾಟಕ ಸರ್ಕಾರವು ಈ ರಾಜ್ಯಗಳಿಂದ ಒಪ್ಪಿಗೆ ಪಡೆದಿದೆಯೇ ಎಂದು ಸಂಸದ ಅನ್ಬುಮಣಿ ರಾಮದಾಸ್ ಪ್ರಶ್ನಿಸಿದ್ದರು.
ಕೇಂದ್ರ ಜಲಶಕ್ತಿ ಸಚಿವಾಲಯದ ಸ್ಪಷ್ಟನೆ: ಸಂಸದರ ಪ್ರಶ್ನೆಗೆ ಉತ್ತರಿಸಿರುವ ಜಲಶಕ್ತಿ ಸಚಿವಾಲಯ, 2018ರ ಫೆಬ್ರವರಿ 16ರ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿನಲ್ಲಿ ನದಿಯ ಮೇಲ್ಭಾಗದ ರಾಜ್ಯವಾದ ಕರ್ನಾಟಕವು ಕಾವೇರಿಗೆ ಅಡ್ಡಲಾಗಿ ಯಾವುದೇ ನಿರ್ಮಾಣ ಕಾರ್ಯ ಅಥವಾ ಯೋಜನೆ ಕೈಗೊಳ್ಳಲು ಕೆಳಭಾಗದ ರಾಜ್ಯಗಳಿಂದ ಅನುಮತಿ ಅಥವಾ ಒಪ್ಪಿಗೆ ಪಡೆಯಬೇಕು ಎಂದು ಎಲ್ಲಿಯೂ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಾವೇರಿ ನ್ಯಾಯಾಧಿಕರಣದ ತೀರ್ಪು ಉಲ್ಲೇಖ: 2007ರ ಕಾವೇರಿ ನೀರು ವಿವಾದ ನ್ಯಾಯಾಧಿಕರಣದ (CWDT) ತೀರ್ಪಿನ 18ನೇ ವಿಧಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದನ್ನು ಕೇಂದ್ರ ಸರ್ಕಾರ ಉಲ್ಲೇಖಿಸಿದೆ. ಈ ನಿಯಮದ ಪ್ರಕಾರ, ನ್ಯಾಯಾಧಿಕರಣ ನಿಗದಿಪಡಿಸಿರುವ ನೀರು ಹಂಚಿಕೆಯ ಆದೇಶಕ್ಕೆ ಯಾವುದೇ ಧಕ್ಕೆಯಾಗದಂತೆ ಆಯಾ ರಾಜ್ಯಗಳ ಗಡಿ ವ್ಯಾಪ್ತಿಯಲ್ಲಿ ನೀರಿನ ಬಳಕೆ ಅಥವಾ ನೀರಾವರಿ ಸೌಲಭ್ಯಗಳನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಹಕ್ಕು ಆಯಾ ರಾಜ್ಯಗಳಿಗೆ ಇರುತ್ತದೆ ಎಂದು ವಿವರಿಸಿದೆ.
ಡಿಪಿಆರ್ ಹಿಂತಿರುಗಿಸಿ ಪರಿಷ್ಕರಣೆಗೆ ಸೂಚನೆ: ಮೇಕೆದಾಟು ಯೋಜನೆಯ ಪ್ರಸ್ತುತ ಸ್ಥಿತಿಯ ಕುರಿತು ಮಾಹಿತಿ ನೀಡಿರುವ ಸಚಿವಾಲಯ, ಕರ್ನಾಟಕ ಸರ್ಕಾರವು 2019ರಲ್ಲಿ ಸಲ್ಲಿಸಿದ್ದ ‘ಮೇಕೆದಾಟು ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆ’ಯ ಸಮಗ್ರ ಯೋಜನಾ ವರದಿಯನ್ನು (DPR) ಈಗಾಗಲೇ ಹಿಂತಿರುಗಿಸಲಾಗಿದೆ ಎಂದು ತಿಳಿಸಿದೆ. ಕಾವೇರಿ ನ್ಯಾಯಾಧಿಕರಣದ ಆದೇಶಗಳು ಹಾಗೂ ಕೇಂದ್ರ ಜಲ ಆಯೋಗದ (CWC) ಪ್ರಸ್ತುತ ಮಾರ್ಗದರ್ಶಿ ಸೂತ್ರಗಳಿಗೆ ಸಂಪೂರ್ಣವಾಗಿ ಬದ್ಧವಾಗಿರುವಂತೆ ಪರಿಷ್ಕೃತ ಡಿಪಿಆರ್ ಅನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಲಿಖಿತ ಉತ್ತರದಲ್ಲಿ ತಿಳಿಸಿದೆ.
Tragedy ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಸೀಟ್ ಕೈತಪ್ಪಿದ್ದಕ್ಕೆ ಮನನೊಂದು ಯುವತಿ ಆತ್ಮಹ*ತ್ಯೆ