Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ನಿನ್ನೆಯಷ್ಟೇ ರೇಪಿಸ್ಟ್ ಉಮೇಶ್ ರೆಡ್ಡಿ, ತರುಣ್ ಕೊಂಡೂರು, ಶಂಕಿತ ಉಗ್ರ ಶಕೀಲ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್ ಆಗಿದ್ದವು. ಈ ಘಟನೆ ಮಾಸುವ ಮುನ್ನವೇ ಮದ್ಯ ಸೇವಿಸಿ ಜೈಲಿನಲ್ಲಿ ವಿಚಾರಣಾ ಕೈದಿಗಳು ನೃತ್ಯ ಮಾಡುತ್ತಿರುವ ಮತ್ತೊಂದು ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಯಾವ ಜೈಲಿನ ವಿಡಿಯೊ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಎಡಿಜಿಪಿ ಬಿ.ದಯಾನಂದ್ ಸೂಚನೆ ಮೇರೆಗೆ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ಹಾಗೂ ಭಾನುವಾರ ಪರಪ್ಪನ ಅಗ್ರಹಾರ ಜೈಲಿನ ಸಂಬಂಧಪಟ್ಟ ಕೈದಿಗಳ ಬ್ಯಾರಕ್ಗಳಲ್ಲಿ ಪೂರ್ಣ ತಪಾಸಣೆ ನಡೆಸಿದರು. ಸುಮಾರು ನೂರಕ್ಕೂ ಹೆಚ್ಚು ಬ್ಯಾರಕ್ಗಳಲ್ಲಿ ತಪಾಸಣೆ ನಡೆಸಿದ್ದು, ಈ ವೇಳೆ ಮೊಬೈಲ್ ಸೇರಿ ಯಾವುದೇ ವಸ್ತು ಪತ್ತೆಯಾಗಿಲ್ಲ.
ಕೈದಿಗಳ ಬಳಿ ಇದ್ದ ಮೊಬೈಲ್ಗಳು ಒಂದೇ ದಿನದಲ್ಲಿ ಮಾಯವಾಗಲು ಹೇಗೆ ಸಾಧ್ಯ ಎಂಬುದರ ಬಗ್ಗೆ ಜೈಲು ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇದರ ಜತೆಗೆ ಜೈಲಿನ ಕೆಲ ಸಿಬ್ಬಂದಿಯೇ ಕೈದಿಗಳೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್ ಆಗಿರುವ ಬೆನ್ನಲ್ಲೇ ಹೊರಬಂದ ವಿಡಿಯೋಗಳು 2023ರದ್ದು ಎಂದು ಜೈಲಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಆ ಎಲ್ಲಾ ವಿಡಿಯೋಗಳು ಇದೇ ವರ್ಷದ್ದು ಎನ್ನಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಬಂಧನ ಆಗಿರುವ ರನ್ಯಾ ಪ್ರಿಯಕರ ತರುಣ್ ಅರೆಸ್ಟ್ ಆಗಿರೋದು ಕಳೆದ ಮಾರ್ಚ್ನಲ್ಲಿ. ವೈರಲ್ ಆಗಿರುವ ವಿಡಿಯೋಗಳಲ್ಲಿ ತರುಣ್ ಕೂಡ ಇದ್ದು, ಆರೋಪದಿಂದ ತಪ್ಪಿಸಿಕೊಳ್ಳಲು ಜೈಲಧಿಕಾರಿಗಳು ಇದು ಹಳೆಯ ವಿಡಿಯೋ ಎಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.