Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸರಗೂರು (ಮೈಸೂರು): ಮೈಸೂರು ಜಿಲ್ಲೆಯಲ್ಲಿ ವ್ಯಾಘ್ರನ ಅಟ್ಟಹಾಸ ಮುಂದುವರಿದಿದ್ದು, ಇದೀಗ ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿರುವ ಘಟನೆ ಜಿಲ್ಲೆಯ ಸರಗೂರು ತಾಲೂಕು ಮೊಳೆಯೂರು ವಲಯದ ಹಳೆ ಹೆಗ್ಗೋಡಿಲು ಗ್ರಾಮದ ಬಳಿ ಶುಕ್ರವಾರ ನಡೆದಿದೆ.ಇದರಿಂದಾಗಿ ಒಂದೇ ತಿಂಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಮೂವರು ಹುಲಿ ದಾಳಿಗೆ ಬಲಿಯಾದಂತಾಗಿದೆ.ಹಳೆ ಹೆಗ್ಗೋಡಿಲು ಗ್ರಾಮದ ನಿವಾಸಿಯಾದ ದಂಡನಾಯಕ ಅಲಿಯಾಸ್ ಚೌಡನಾಯಕ(55) ಹುಲಿ ದಾಳಿಗೆ ಬಲಿಯಾದ ರೈತ. ಶುಕ್ರವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಹುಲಿ ದಾಳಿ ಮಾಡಿ ಎಳೆದೊಯ್ದಿದೆ. ಚೌಡನಾಯಕರನ್ನು ಹುಲಿ ಎಳೆದೊಯ್ದಾಗ ಅಲ್ಲಿದ್ದ ಎತ್ತುಗಳು ಗಾಬರಿಯಿಂದ ರೈತನ ಮನೆಗೆ ಓಡಿ ಬಂದಿದ್ದವು. ಇದರಿಂದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆತಂಕಗೊಂಡು ಜಮೀನಿನತ್ತ ಧಾವಿಸಿ ಬಂದು ಹುಡುಕಾಟ ನಡೆಸಿದಾಗ ಹಳ್ಳವೊಂದರಲ್ಲಿ ಹುಲಿ ತಿಂದು ಬಿಸಾಡಿರುವ ರೀತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಆನೆ ದಾಳಿಯಿಂದ ಬಚಾವಾಗಿದ್ದ:
ಕಳೆದ ವರ್ಷ ಜಮೀನಿನಲ್ಲಿ ಕೆಲಸ ಮಾಡುವಾಗ ಆನೆ ದಾಳಿ ಮಾಡಿದ್ದರಿಂದ ರೈತ ಚೌಡನಾಯಕನ ಸೊಂಟ ಮುರಿದಿತ್ತು. ನಂತರ ಚೇತರಿಸಿಕೊಂಡಿದ್ದ ಇವರು, ಮೂರು ತಿಂಗಳಿನಿಂದ ಜಮೀನಿಗೆ ಹೋಗಿ ಕೆಲಸ ಮಾಡುತ್ತಿದ್ದಾಗ ಹುಲಿ ದಾಳಿಗೆ ಮೃತಪಟ್ಟಿದ್ದಾರೆ.ಚೌಡನಾಯಕ ಪತ್ನಿ ರುಕ್ಮಿಣಿ, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಆರ್‌ಎಫ್‌ಓ ಮೇಲೆ ಹಲ್ಲೆ;
ಹುಲಿ ದಾಳಿಗೆ ರೈತ ಬಲಿಯಾದ ಜಮೀನು ಮಲೆಯೂರು ಅರಣ್ಯ ಪ್ರದೇಶದ ಹತ್ತಿರವೇ ಇರುವ ಕಾರಣ ವಿಷಯ ತಿಳಿದ ಆರ್‌ಎಫ್ ಒ ಅಮೃತಾ ಅವರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಘಟನೆಯಿಂದ ರೊಚ್ಚಿಗೆದ್ದಿದ್ದ ಮಹಿಳೆಯರು ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ತಿಳಿದುಬಂದಿದೆ.ತಕ್ಷಣವೇ ಸರಗೂರು ಠಾಣಾ ಪೊಲೀಸರು ಅಮೃತಾ ಅವರಿಗೆ ರಕ್ಷಣೆ ನೀಡಿ ಅಲ್ಲಿಂದ ಕರೆದೊಯ್ದಿದ್ದಾರೆ ಎನ್ನಲಾಗಿದೆ.ಪದೇ ಪದೇ ಹುಲಿ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ÷್ಯ ವಹಿಸಿದ್ದಾರೆ. ಗ್ರಾಮದಲ್ಲಿ ಹುಲಿ
ಹೆಜ್ಜೆ ಇರುವ ಬಗ್ಗೆ ಅಧಿಕಾರಿಗಳಿಗೆ ತಿಳಿದರೂ ಅದನ್ನು ಸೆರೆ ಹಿಡಿಯಲು ಬೋನು ಇಟ್ಟಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಒಂದೇ ತಿಂಗಳಲ್ಲಿ ಮೂವರು ಬಲಿ:
ಇತ್ತೀಚೆಗೆ, ಸರಗೂರು ಬಡಗಲಪುರ ಗ್ರಾಮದಲ್ಲಿ ಮಹದೇವ (ಮಾದೇಗೌಡ) ಎಂಬವರು ಹುಲಿ ದಾಳಿಯಿಂದ ಕಣ್ಣುಗಳನ್ನು ಕಳೆದುಕೊಂಡು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯ ಬಳಿಕ ಬೆಣ್ಣೆಗೆರೆ ಗ್ರಾಮದ ರಾಜಶೇಖರ್ ಹಾಗೂ ಕುರ್ಣೇಗಾಲ ಗ್ರಾಮದ ದೊಡ್ಡನಿಂಗಯ್ಯ ಎಂಬವರು ಹುಲಿ ದಾಳಿಗೆ ಬಲಿಯಾಗಿದ್ದಾರೆ.ಇದೀಗ ಚೌಡನಾಯಕ ಎಂಬ ರೈತ ಮೃತಪಟ್ಟಿದ್ದಾನೆ. ಈ ಮೂಲಕ ಹುಲಿ ದಾಳಿಗೆ ಮೂವರು ಪ್ರಾಣ ಕಳೆದುಕೊಂಡಂತಾಗಿದೆ.ಪದೇ ಪದೇ ಹುಲಿ ದಾಳಿ ಹಿನ್ನಲೆ ಕಾಡಂಚಿನ ಗ್ರಾಮದ ನಿವಾಸಿಗಳು ಕಂಗಾಲಾಗಿದ್ದು, ಕೆಲಸಕ್ಕೆ ಹೋಗಲೂ ಸಾದ್ಯವಾಗದ ಪರಿಸ್ಥಿತಿ ಉಂಟಾಗಿದೆ.
ನಾಗರಹೊಳೆ, ಬಂಡೀಪುರ ಸಫಾರಿ ಬಂದ್
ಮೈಸೂರು ಜಿಲ್ಲೆಯ ನಾಗರಹೊಳೆ ಮತ್ತು ಬಂಡೀಪುರ ಸಫಾರಿಯನ್ನು ಹಾಗೂ ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಚಾರಣವನ್ನು ಇಂದಿನಿಂದಲೇ ಬಂದ್ ಮಾಡಿ, ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲು ಸಚಿವ ಈಶ್ವರ ಬಿ ಖಂಡ್ರೆ ಆದೇಶಿಸಿದ್ದಾರೆ.
ಚರಂಡಿಯಲ್ಲಿ ಬೆಂಗಳೂರು ಟೆಕ್ಕಿಗಳ ಸಂಚಾರ; ದಾರಿಯಲ್ಲ ಕಣ್ರೀ ಇದು ಮೋರಿ, ವೈರಲ್ ವಿಡಿಯೋ ನೋಡಿ