newsics.com
ಧರ್ಮಸ್ಥಳ ಶವ ಹೂತು ಪ್ರಕರಣದ ತನಿಖೆಯಲ್ಲಿ ಹೊಸ ತಿರುವು. ಪಾಯಿಂಟ್ ನಂಬರ್ 13ರಲ್ಲಿ ಶೋಧ ಕಾರ್ಯ ಸ್ಥಗಿತಗೊಂಡಿದ್ದು, ಎಸ್ಐಟಿ ಸಾಕ್ಷ್ಯ ಪರಿಕರಗಳ ವಿಶ್ಲೇಷಣೆಯತ್ತ ಗಮನ ಹರಿಸಿದೆ. ಮುಸುಕುಧಾರಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹಲವು ಮಂದಿಯ ವಿಚಾರಣೆ ನಡೆದಿದೆ.
ಹೌದು, ಸ್ಪಾಟ್ ನಂಬರ್ 13 ಎಸ್ಐಟಿಗೆ ಇನ್ನೂ ಬಹುದೊಡ್ಡ ಸವಾಲಾಗಿ ಉಳಿದಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಸುಕುಧಾರಿಯ ತೀವ್ರ ವಿಚಾರಣೆಯನ್ನೂ ನಡೆಸಲಾಗಿದೆ. ವಕೀಲರೊಂದಿಗೆ ಎಸ್ಐಟಿ ಕಚೇರಿಗೆ ಬಂದ ದೂರುದಾರನನ್ನು ಕಳೆದ 2 ಗಂಟೆ 45 ನಿಮಿಷಗಳಿಂದ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದುವರೆಗೆ 15ಕ್ಕೂ ಹೆಚ್ಚು ವ್ಯಕ್ತಿಗಳನ್ನು ಪ್ರಶ್ನಿಸಲಾಗಿದೆ. ಜೊತೆಗೆ ಹತ್ತಕ್ಕೂ ಹೆಚ್ಚು ಜನರನ್ನು ಈಗಲೂ ವಿಚಾರಣೆಗೆ ಕರೆಸಲಾಗಿದ್ದು, ಅವರನ್ನು ಪೊಲೀಸರು ಸೂಕ್ತ ದಾಖಲೆಗಳೊಂದಿಗೆ ಪ್ರಶ್ನಿಸುತ್ತಿದ್ದಾರೆ. ಪ್ರಕರಣದ ಸಂಬಂಧ ಎಲ್ಲ ಮಾಹಿತಿಗಳ ಪರಿಶೀಲನೆ ನಡೆಯುತ್ತಿದ್ದು, ಮುಂದಿನ ಹಂತದ ಕ್ರಮಗಳಿಗೆ ಮುಂದಾಗಿದ್ದಾರೆ.
ಇನ್ನು ಧರ್ಮಸ್ಥಳ ಗ್ರಾಮದಲ್ಲಿ ಆಗಸ್ಟ್ 6ರಂದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ನಂತರ, ಬೆಳ್ತಂಗಡಿ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು 7 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಧರ್ಮಸ್ಥಳ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಈ ಸಂಬಂಧ ಕ್ರಮ ತೆಗೆದುಕೊಳ್ಳಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಪ್ರಕರಣಗಳು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳಲ್ಲೂ ಒಟ್ಟಾರೆ 150ಕ್ಕೂ ಅಧಿಕ ವ್ಯಕ್ತಿಗಳ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.