newsics.com
ಬೆಂಗಳೂರು : ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಎಂಬಂತೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಆಹಾರದ ಕಿಟ್ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಗಳ ಪ್ರಕಾರ, ಈ ಬಗ್ಗೆ ಪ್ರಸ್ತಾವನೆ ಸಿದ್ಧವಾಗಿದೆ. ಜುಲೈ 2 ರಂದು ನಂದಿ ಬೆಟ್ಟದಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿ ಸಿಗುತ್ತಿದ್ದು, ಅದು ಕಪ್ಪು ಮಾರುಕಟ್ಟೆಗೆ ಹೋಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಆಹಾರದ ಕಿಟ್ ನಲ್ಲಿ ಸಕ್ಕರೆ, ಉಪ್ಪು, ತೊಗರಿಬೇಳೆ, ಕಾಫಿಪುಡಿ, ಟೀ ಪುಡಿ, ಅಡುಗೆ ಎಣ್ಣೆ, ಗೋಧಿ ಇರಲಿದೆ . ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದರೆ ಮಾತ್ರ ವಿತರಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿ ಪಿ.ಎಚ್.ಹೆಚ್ ಪಡಿತರ ಚೀಟಿದಾರರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ ಸಿಗುತ್ತದೆ. ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿ ನೀಡುತ್ತದೆ. ರಾಜ್ಯ ಸರ್ಕಾರವು 5 ಕೆ.ಜಿ ಅಕ್ಕಿ ನೀಡುತ್ತದೆ. ಎರಡೂ ಉಚಿತವಾಗಿ ಸಿಗುತ್ತವೆ.