newsics.com
ನವದೆಹಲಿ: ಭಾರತೀಯ ಸೇನೆಗೆ ಸ್ವದೇಶಿ ನಿರ್ಮಿತ ಜೋರಾವರ್ ಲಘು ಟ್ಯಾಂಕ್‌ನ ಬಲ ಸದ್ಯದಲ್ಲೇ ಲಭ್ಯವಾಗಲಿದೆ.
ಎರಡು ವರ್ಷಗಳ ಅತಿ ಕಡಿಮೆ ಅವಯಲ್ಲಿ ಈ ಟ್ಯಾಂಕ್ ಅಭಿವೃದ್ಧಿಪಡಿಸಲಾಗಿದ್ದು, ಶನಿವಾರ ಗುಜರಾತ್‌ನ ಹಾಜಿರಾದಲ್ಲಿರುವ ಎಲ್ ಆ್ಯಂಡ್ ಟಿ ಸ್ಥಾವರದಲ್ಲಿ ಅನಾವರಣ ಮಾಡಲಾಗಿದೆ.
ಈ ಟ್ಯಾಂಕನ್ನು ಚೀನಾ ಗಡಿ ಅಂದರೆ ಲಡಾಖ್‌ನಲ್ಲಿ ನಿಯೋಜನೆ ಮಾಡಲಾಗುವುದು ಎಂದು ಸೇನಾ ಮೂಲಗಳು ಹೇಳಿವೆ.
ಈ ಟ್ಯಾಂಕನ್ನು ಡಿಆರ್‌ಡಿಒ ಮತ್ತು ಎಲ್ ಆ್ಯಂಡ್ ಟಿ ಒಟ್ಟಿಗೆ ಸೇರಿ ಅಭಿವೃದ್ಧಿಪಡಿಸುತ್ತಿವೆ. ಶನಿವಾರ ಇದನ್ನು ಹಾಜಿರಾದಲ್ಲೇ ಪರಿಶೀಲನೆಗೊಳಪಡಿಸಲಾಗಿದೆ. ಖುದ್ದು ಡಿಆರ್‌ಡಿಒ ಮುಖ್ಯಸ್ಥ ಡಾ.ಸಮೀರ್ ವಿ ಕಾಮತ್ ಅವರೇ ಮೇಲುಸ್ತುವಾರಿ ವಹಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಭೀತಿಯ ನಡುವೆಯೇ ಭಾರತವೂ ಅತ್ಯಂತ ಕಡಿಮೆ ಅವಧಿಯಲ್ಲಿ ಟ್ಯಾಂಕ್‌ಗಳನ್ನು ಅಭಿವೃದ್ಧಿಗೊಳಿಸಲು ಮುಂದಾಗಿತ್ತು. ಅದರ ಯೋಜನೆಯಲ್ಲೇ ಎಲ್ ಆ್ಯಂಡ್ ಟಿ ಜತೆ ಸೇರಿಕೊಂಡು ಡಿಆರ್‌ಡಿಒ ಈ ಜೋರಾವರ್ ಎಂಬ ಲಘು ಟ್ಯಾಂಕ್‌ಗಳನ್ನು ಅಭಿವೃದ್ಧಿಪಡಿಸಿದೆ. ಅಷ್ಟೇ ಅಲ್ಲ, ಚೀನಾ ಗಡಿಯಲ್ಲಿ ಸಂಚರಿಸಲು ಬೇಕಾದ ರೀತಿಯಲ್ಲೇ ಲಘುವಾಗಿ ಈ ಟ್ಯಾಂಕ್‌ಗಳನ್ನು ರೂಪಿಸಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
25 ಟನ್ ತೂಕ:
ಜೋರಾವರ್ ಟ್ಯಾಂಕ್ 25 ಟನ್ ತೂಕವಿದೆ. ಸದ್ಯ ಭಾರತದಲ್ಲಿರುವ ಟಿ-90 ಟ್ಯಾಂಕ್‌ನ ತೂಕದ ಅರ್ಧದಷ್ಟಿವೆ. ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಹೊಸ ಟ್ಯಾಂಕ್ ವಿನ್ಯಾಸಗೊಳಿಸಿ ಪ್ರಯೋಗಗಳಿಗೆ ಸಿದ್ಧಗೊಳಿಸಲಾಗಿದೆ.
ಆರಂಭದಲ್ಲಿ 59 ಟ್ಯಾಂಕ್‌ಗಳನ್ನು ಸೇನೆಗೆ ಒದಗಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ 295 ಶಸ್ತ್ರಸಜ್ಜಿತ ಟ್ಯಾಂಕ್‌ಗಳು ಭಾರತೀಯ ಸೇನೆ ಸೇರಲಿವೆ. ಸುಮಾರು 2027ರ ಹೊತ್ತಿಗೆ ಇವುಗಳನ್ನು ಸೇನೆಗೆ ಸೇರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ. 12ರಿಂದ 18 ತಿಂಗಳಲ್ಲಿ ಪ್ರಯೋಗಗಳು ಪೂರ್ಣಗೊಳ್ಳಲಿವೆ.
19ನೇ ಶತಮಾನದ ಡೋಗ್ರಾ ಜನರಲ್ ಜೋರಾವರ್ ಸಿಂಗ್ ಎಂಬ ಮಿಲಿಟರಿ ಅಕಾರಿ ನೆನಪಿನಲ್ಲಿ ಈ ಟ್ಯಾಂಕ್‌ಗಳಿಗೆ ಜೋರಾವರ್ ಎಂಬ ಹೆಸರಿಡಲಾಗಿದೆ. ಇವರು ಲಡಾಖ್ ಮತ್ತು ಪಶ್ಚಿಮ ಟಿಬೆಟ್ ಜಾಗದಲ್ಲಿ ಮಿಲಿಟರಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಮುದ್ದಿನ ನಾಯಿಗೆ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಉಡುಗೊರೆ ನೀಡಿದ ಮಹಿಳೆ! ವೈರಲ್ ವಿಡಿಯೋ ನೋಡಿ
2025ರಲ್ಲಿ ಯೂರೋಪ್ ಸಂಘರ್ಷ, 5079ರಲ್ಲಿ ಪ್ರಪಂಚವೇ ಅಂತ್ಯ: ಭವಿಷ್ಯ ನುಡಿದ ಬಾಬಾ ವಂಗಾ