newsics.com
ಬೆಂಗಳೂರು: ಕರ್ನಾಟಕದಲ್ಲಿ ಈ ವರ್ಷ ಉತ್ತಮ ಮುಂಗಾರು ಮಳೆಯಾಗುತ್ತಿದೆ. ಆದರೂ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎನ್ನುತ್ತಿವೆ ಹವಾಮಾನ ಇಲಾಖೆ ಅಂಕಿ-ಅಂಶಗಳು.
ಈಗಾಗಲೇ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜೂನ್ 1 ರಿಂದ ಜುಲೈ 2 ರವರೆಗೆ ರಾಜ್ಯದಲ್ಲಿ ವಾಡಿಕೆಯಂತೆ 216.5 ಮಿಮೀ ಮಳೆಯಾಗಬೇಕಿದ್ದು, 212.5 ಮಿಮೀ ಮಳೆಯಾಗಿದೆ ಎಂದು ಹಾವಾಮಾನ ಇಲಾಖೆ ಅಂಕಿಅಂಶಗಳಿಂದ ತಿಳಿದುಬಂದಿದೆ.
ಬೆಂಗಳೂರು ನಗರ ಪ್ರದೇಶದಲ್ಲಿ ಶೇ.55ರಷ್ಟು ಅಧಿಕ ಮಳೆ ದಾಖಲಾಗಿದೆ. ಇಲ್ಲಿ ವಾಡಿಕೆಯ 77.8 ಮಿಮೀ ವಿರುದ್ಧ, 119.2 ಮಿಮೀ ಮಳೆ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ 73ರಷ್ಟು ಅಧಿಕ ಮಳೆಯಾಗಿದೆ. ಇಲ್ಲಿ 69 ಮಿಮೀಗೆ ವಿರುದ್ಧವಾಗಿ, 119.2 ಮಿಮೀ ದಾಖಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಗರಿಷ್ಠ ಶೇ 136ರಷ್ಟು ಮಳೆಯಾಗಿದೆ. ಇಲ್ಲಿ ವಾಡಿಕೆಯ ಮಳೆ ಪ್ರಮಾಣ 91.8 ಮಿಮೀ ಆಗಿದ್ದು, ಈ ವರ್ಷ ಜೂನ್ನಲ್ಲಿ 216.3 ಮಿಮೀ ಮಳೆಯಾಗಿದೆ.
ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು, ಅಂದರೆ ಶೇ 45ರಷ್ಟು ಕೊರತೆ ದಾಖಲಾಗಿದ್ದು, ವಾಡಿಕೆಯ 172.4 ಮಿಮೀಗೆ ಹೋಲಿಸಿದರೆ 95.6 ಮಿಮೀ ಮಳೆಯಾಗಿದೆ. ಹಾವೇರಿಯಲ್ಲಿ ಎರಡನೇ ಅತಿಹೆಚ್ಚು ಶೇ 43ರಷ್ಟು ಮಳೆ ಕೊರತೆಯಾಗಿದೆ. ಇಲ್ಲಿ ವಾಡಿಕೆಯ 130 ಮಿಮೀ ವಿರುದ್ಧ, 74.3 ಮಿಮೀ ಮಳೆಯಾಗಿದೆ.
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳು, ಮಲೆನಾಡು, ಕಾವೇರಿ ಜಲಾನಯನ ಪ್ರದೇಶಗಳಲ್ಲಿಯೂ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಮಳೆಯಾಗುತ್ತಿದೆ.